ದೇಶ

ನಾಪತ್ತೆಯಾದ ಐಎಎಫ್ ವಿಮಾನದ ಎಲ್ಲಾ 29 ಮಂದಿ ಸಾವು ಎಂದು ಭಾವಿಸಿ: ಐಎಎಫ್

Lingaraj Badiger
ಚೆನ್ನೈ: ಜುಲೈ 22ರಂದು ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆ(ಐಎಎಫ್)ಯ ಎಎನ್‌–32 ವಿಮಾನದಲ್ಲಿ ಎಲ್ಲಾ 29 ಮಂದಿ ಮೃತಪಟ್ಟಿರುವುದಾಗಿ ಭಾವಿಸಿ ಎಂದು ಗುರುವಾರ ಐಎಎಫ್ ಅಧಿಕೃತವಾಗಿ ಹೇಳಿದೆ.
ವಿಮಾನ ನಾಪತ್ತೆ ಕುರಿತು ತನಿಖೆ ನಡೆಸಿದ ನಂತರ ಐಎಎಫ್ ಎಲ್ಲಾ 29 ಮಂದಿಯ ಕುಟುಂಬಕ್ಕೂ ಸಾವಿನ ಪ್ರಮಾಣಪತ್ರ ನೀಡಿದ್ದು, ಅದಕ್ಕೆ ಸಹಿ ಹಾಕುವಂತೆ ಕುಟುಂಬ ಸದಸ್ಯರಿಗೆ ಮನವಿ ಮಾಡಿದೆ.
ಈ ಸಂಬಂಧ ನಾಪತ್ತೆಯಾದ ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿಯ ಕುಟುಂಬಕ್ಕೂ ನಾವು ಪತ್ರ ಬರೆದಿದ್ದೇವೆ ಮತ್ತು ಪರಿಹಾರ ಪ್ರಕ್ರಿಯೆ ಆರಂಭಿಸಲು ಸಾವು ಎಂದು ಭಾವಿಸುವ ಪ್ರಮಾಣಪತ್ರಕ್ಕೆ ಸಹಿ ಹಾಕುವಂತೆ ಮನವಿ ಮಾಡಿರುವುದಾಗಿ ಐಎಎಫ್ ಮೂಲಗಳು ತಿಳಿಸಿವೆ,
ಪ್ರಮಾಣ ಪತ್ರಕ್ಕೆ ಸಹಿ ಹಾಕುವುದು, ಬಿಡುವುದು ಕಟುಂಬ ಸದಸ್ಯರಿಗೆ ಬಿಟ್ಟ ವಿಚಾರ. ಆದರೆ ಸಹಿ ಹಾಕದಿದ್ದರೆ ಪರಿಹಾರ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳಿದ್ದಾರೆ.
ಜುಲೈ 22ರಂದು ಆರು ಮಂದಿ ವಿಮಾನ ಸಿಬ್ಬಂದಿ ಸೇರಿ 29 ಜನರಿದ್ದ ಭಾರತೀಯ ವಾಯುಪಡೆಯ ಎಎನ್‌–32 ವಿಮಾನ ಚೆನ್ನೈನಿಂದ ಅಂಡಮಾನ್‌ ನಿಕೋಬಾರ್‌ನ ಪೋರ್ಟ್‌ ಬ್ಲೇರ್‌ನತ್ತ ಪ್ರಯಾಣ ಬೆಳೆಸಿದ ಕೆಲ ಸಮಯದ ಬಳಿಕ ನಾಪತ್ತೆಯಾಗಿದ್ದು, ಇದುವರೆಗೂ ವಿಮಾನದ ಅವಶೇಷಗಳು ಪತ್ತೆಯಾಗಿಲ್ಲ.
SCROLL FOR NEXT