ನವದೆಹಲಿ: ನಮ್ಮ ದೇಶದಲ್ಲಿರುವ ಹಲವಾರು ವೈದ್ಯರಿಗೆ ನಿಜವಾದ ವೈದ್ಯಕೀಯ ಅರ್ಹತೆಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೊರಹಾಕಿರುವ ಮಾಹಿತಿಯಿಂದ ತಿಳಿದುಬಂದಿದೆ.
ಭಾರತದ ಆರೋಗ್ಯ ಕಾರ್ಯಪಡೆ ಹೆಸರಿನ ಈ ಸಮೀಕ್ಷಾ ಅಧ್ಯಯನದಲ್ಲಿ ದೇಶದ ವೈದ್ಯಕೀಯ ಲೋಕದಲ್ಲಿರುವ ವೈದ್ಯರೆಷ್ಟು, ನರ್ಸ್‌ಗಳು ಎಷ್ಟಿದ್ದಾರೆ ಎಂಬ ಮಾಹಿತಿ ಯನ್ನೂ ಹೊರಗೆಡವಿದೆ.
ದೇಶದ ವೈದ್ಯಕೀಯ-ಆರೋಗ್ಯ ಸೇವಾ ವಲಯದಲ್ಲಿ ಅರ್ಹತೆ ಹೊಂದಿದ ವೈದ್ಯರು, ದಾದಿಯರೆಷ್ಟಿದ್ದಾರೆ? ದೇಶದ ಯಾವ ಭಾಗದಲ್ಲಿ ವೈದ್ಯಕೀಯ ಕಾರ್ಯಪಡೆಯ ಸಾಂದ್ರತೆ ಹೆಚ್ಚಿದೆ ಎಂಬ ಕುರಿತು ತಿಳಿವ ಯತ್ನ ಈ ಸಮೀಕ್ಷೆಯದ್ದು.
ವಿಶ್ವ ಆರೋಗ್ಯ ಸಂಸ್ಥೆ "ದಿ ಹೆಲ್ತ್ ವರ್ಕ್‌ಫೋರ್ಸ್ ಇನ್ ಇಂಡಿಯಾ' ಹೆಸರಿನ ಈ ಸಮೀಕ್ಷೆಯನ್ನು ಭಾರತದಲ್ಲಿ ನಡೆಸಿ, ಇತ್ತೀಚಿಗೆ ಬಿಡುಗಡೆ ಮಾಡಿತ್ತು. ಇದಕ್ಕೆ 2001ರ ಜನಗಣತಿ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡಿದೆ. ಸಮೀಕ್ಷೆಯ ಫಲಿತಾಂಶಗಳು ವೈದ್ಯಕೀಯ ಅರ್ಹತೆ ಇಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರಾಗಿದ್ದಾರೆ ಎಂಬ ಆಘಾತಕಾರಿ ಅಂಶಗಳನ್ನು ಬೊಟ್ಟು ಮಾಡಿದೆ.
ಸಮೀಕ್ಷೆಯಲ್ಲಿ ತಿಳಿದುಬಂದಿರುವ ಇನ್ನೊಂದು ಆಘಾತಕಾರಿ ವಿಷಯವೆಂದರೆ ಶೇಕಡಾ 31.4ರಷ್ಟು ವೈದ್ಯರ ಕಲಿಕೆ ಹೈಸ್ಕೂಲಿಗೂ ಕಡಿಮೆಯಿದೆ.ಸಮೀಕ್ಷೆಯಲ್ಲಿ ಹೇಳಿದ ಮಾಹಿತಿಗಳು ಆಘಾತ ಮೂಡಿಸುವಂತಿದೆ. ಅಲೋಪತಿ ವೈದ್ಯರಲ್ಲಿ ಶೇಕಡಾ 31.4ರಷ್ಟು ಮಂದಿ ಕಲಿತದ್ದು ಹೈಸ್ಕೂಲಿಗಿಂತಲೂ ಕಡಿಮೆ.ಶೇಕಡಾ 57.3ರಷ್ಟು ಮಂದಿಗೆ ವೈದ್ಯಕೀಯ ಕಲಿಕೆಯೇ ಆಗಿಲ್ಲ! ಇನ್ನು ದಾದಿಯರಲ್ಲಿ ಶೇಕಡಾ 67.1ರಷ್ಟು ಮಂದಿ ಗರಿಷ್ಠ 12ನೇ ತರಗತಿ ವರೆಗೆ ಕಲಿತಿದ್ದಾರೆ.
ಸಮೀಕ್ಷೆ ಅಂಕಿ ಅಂಶಗಳ ಪ್ರಕಾರ, 2001ರ ಜನಗಣತಿ ಪ್ರಕಾರ, ಜನಸಂಖ್ಯೆ 102 ಕೋಟಿ. ಇದರಲ್ಲಿ 20.69 ಲಕ್ಷ ವೈದ್ಯಕೀಯ ಕಾರ್ಯಪಡೆಯವರು. ಕಾರ್ಯಪಡೆಯಲ್ಲಿ 819475/(ಶೇ.39.6)ರಷ್ಟು ಮಂದಿ ವೈದ್ಯರು. 630406/ (ಶೇ.30.5) ದಾದಿಯರು, 24403 (ಶೇಕಡಾ 1.2)ರಷ್ಟು ದಂತ ವೈದ್ಯರಿದ್ದಾರೆ. ವೈದ್ಯರ ಪೈಕಿ ಶೇಕಡಾ 77.2ರಷ್ಟು ಮಂದಿ ಅಲೋಪತಿ ವೈದ್ಯರಾಗಿದ್ದು, ಶೇಕಡಾ 22.8ರಷ್ಟು ಮಂದಿ ಆಯುರ್ವೇದ, ಹೋಮಿಯೋಪತಿ, ಯುನಾನಿ ವೈದ್ಯರಾಗಿದ್ದಾರೆ. ಉಳಿದಂತೆ ವಿವಿಧ ವೈದ್ಯಕೀಯ ಕಾರ್ಯಪಡೆ ಮಂದಿ ಶೇಕಡಾ 28.8ರಷ್ಟಿದ್ದಾರೆ. ಸಮೀಕ್ಷೆ ಪ್ರಕಾರ ದೇಶದ ವೈದ್ಯಕೀಯ ಕಾರ್ಯಪಡೆಯಲ್ಲಿ ಒಟ್ಟು 9 ವಿಧದ ಕೆಲಸಗಾರರನ್ನು ಗುರುತಿಸಲಾಗಿದೆ.
ವೈದ್ಯಕೀಯ ಅರ್ಹತೆ ಇಲ್ಲದವರೂ ವೈದ್ಯ ವೃತ್ತಿ ನಡೆಸುತ್ತಿರುವುದು ದೇಶದಲ್ಲಿ ವ್ಯಾಪಕವಾಗಿದೆ. ಇದಕ್ಕೆ ಕಾನೂನಿನಲ್ಲಿ ಬಿಗಿಕ್ರಮ ಕೈಗೊಳ್ಳದಿರುವುದು ಮತ್ತು ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸದೇ ಇರುವುದು ಕಾರಣವಾಗಿದೆ ಎಂದು ಭಾರತೀಯ ವೈದ್ಯಕೀಯ ಸಮಿತಿಯ ನಕಲಿ ವೈದ್ಯರ ವಿರುದ್ಧ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕೃಷ್ಣನ್ ಹೇಳುತ್ತಾರೆ.