ಭುವನೇಶ್ವರ: ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅತವಾಲೆ ಬಲವಾಗಿ ಒತ್ತಾಯಿಸಿದ್ದಾರೆ.
ಅಲ್ಲದೆ ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದವರಿಗೆ ಮೀಸಲಾತಿ ಸೌಲಭ್ಯವನ್ನು ಶೇಕಡಾ 50ರಿಂದ ಶೇಕಡಾ 75ಕ್ಕೆ ಏರಿಸಬೇಕು ಎಂದು ಕೂಡ ಅವರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ತಾವು ಭೇಟಿ ಮಾಡಿ ಪ್ರಸ್ತಾಪ ಮುಂದಿಡಲಿದ್ದು, ಹೆಚ್ಚುವರಿ ಕೋಟಾಗೆ ಸಾಂವಿಧಾನಿಕ ತಿದ್ದುಪಡಿ ಸಾಧ್ಯವೇ ಎಂದು ನೋಡಬೇಕೆಂದು ಅವರು ಹೇಳಿದ್ದಾರೆ.
ಕೆಲವರು ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರೂ ಕೂಡ ಆ ಸೌಲಭ್ಯ ಹೋಗುವುದಿಲ್ಲ. ತಾವು ಯಾವತ್ತಿಗೂ ಆರ್ಥಿಕವಾಗಿ ದುರ್ಬಲವಿರುವ ಜನರಿಗೆ ಅವರು ಯಾವುದೇ ಜಾತಿಗೆ ಸೇರಿದವರಾಗಿರಲಿ ಅಂತವರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಪಡಿಸುತ್ತಾ ಬಂದಿದ್ದೇನೆಯೇ ಹೊರತು ಜಾತಿಯ ಆಧಾರದ ಮೇಲೆ ಮೀಸಲಾತಿಗಲ್ಲ ಎಂದು ಅತವಾಲೆ ಹೇಳಿದ್ದಾರೆ.
ಅನೇಕ ವರ್ಷಗಳಿಂದ ನಾನು ಇದಕ್ಕೆ ಬೇಡಿಕೆಯೊಡ್ಡುತ್ತಾ ಬಂದಿದ್ದು, ಇದು ಸಮಸ್ಯೆಯನ್ನು ಬಗೆಹರಿಸುತ್ತದೆ ಎಂದು ನಾನು ನಂಬಿದ್ದೇನೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಮೋದಿಯವರು ದಲಿತರು ಮತ್ತು ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಕಾಳಜಿ ವಹಿಸಿದ್ದಾರೆ. ಎನ್ ಡಿಎ ಸರ್ಕಾರ ಈ ನಿಟ್ಟಿನಲ್ಲಿ ಸರಣಿ ಕಾರ್ಯಕ್ರಮಗಳನ್ನು ಆರಂಭಿಸಿದೆ ಎಂದು ಅತವಾಲೆ ಹೇಳಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಹಿಂದುಳಿದ ವರ್ಗದವರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos