ನವದೆಹಲಿ: ಹೆಚ್ಚುತ್ತಿರುವ ಚಿಕುನ್ ಗುನ್ಯಾ ಮತ್ತು ಡೆಂಗ್ಯೂ ರೋಗ ತಡೆಗೆ ಸೂಕ್ತ ರೀತಿಯ ಕ್ರಮಕೊಳ್ಳದ ದೆಹಲಿ ಸರ್ಕಾರ ಹಾಗೂ ಮುನ್ಸಿಪಲ್ ಕಾರ್ಪೋರೇಷನ್ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಿಡಿಕಾರಿದೆ.
ರಾಜಧಾನಿ ದೆಹಲಿಯಲ್ಲಿ ಚಿಕುನ್ ಗುನ್ಯಾ ಮತ್ತು ಡೆಂಗ್ಯೂ ರೋಗಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕಳೆದ ಎರಡು ತಿಂಗಳಿನಿಂದ ಏನು ಮಾಡುತ್ತಿದ್ದೀರಾ? ರಾಜಧಾನಿಯಲ್ಲಾಗುತ್ತಿರುವ ಬೆಳವಣಿಗೆಯನ್ನು ನೋಡಿದರೆ, ಯಾವುದೇ ರೀತಿಯ ಯೋಜನೆಗಳನ್ನು ರೂಪಿಸಿಲ್ಲ ಎಂಬುದನ್ನು ತೋರಿಸುತ್ತದೆ.
ದೆಹಲಿಯಲ್ಲಿರು ರೋಗಕ್ಕೆ ಒಳಗಾಗುತ್ತಿರುವವರ ಸಂಖ್ಯೆ ದಿನ ಕಳೆಯುತ್ತಿದ್ದಂತೆ ಹೆಚ್ಚಾಗುತ್ತಿದೆ. ಈ ಬಗ್ಗೆ ಸರ್ಕಾರ ಕಣ್ಣು ಮುಚ್ಚಿ ಕೂರಬಾರದು. ಎಂಸಿಡಿ, ಡಿಡಿಎ, ದೆಹಲಿ ಸರ್ಕಾರ ಮತ್ತು ಎನ್ ಡಿಎಂಸಿ ಒಟ್ಟಾರೆ ಸೇರಿ ಚರ್ಚೆ ನಡೆಸಿ ಸೂಕ್ತ ರೀತಿಯ ಕ್ರಮವನ್ನೇಕೆ ಕೈಗೊಳ್ಳಬಾರದು ಎಂದು ಹೇಳಿದೆ.
ರೋಗ ತಡೆಗೆ ಶೀಘ್ರದಲ್ಲೇ ಎಂಸಿಡಿ ಪ್ರದೇಶಗಳಲ್ಲಿ ಉಪ ಆಯುಕ್ತರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ರಚನೆ ಮಾಡಿ. ಸಮತಿಯ ಸೂಚನೆಯಂತೆಯೇ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಿ. 15 ದಿನದೊಳಗಾಗಿ ವರದಿಯನ್ನು ಸಲ್ಲಿಕೆ ಮಾಡಿದ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದೆ.