ಯುನೈಟೆಡ್ ನೇಷನ್ಸ್: ಕಾಶ್ಮೀರದ ಸೇನಾ ಕಚೇರಿ ಮೇಲೆ ಭಯೋತ್ಪಾದಕ ದಾಳಿ ನಡೆಸುವುದೂ ಅಲ್ಲದೆ, ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಬೊಬ್ಬೆ ಹೊಡೆದಿದ್ದ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯಲ್ಲಿ ಭಾರತ ಭಯೋತ್ಪಾದನೆ ಮಾನವ ಹಕ್ಕುಗಳಿಗೆ ಎದುರಾಗಿರುವ ಅತಿ ದೊಡ್ಡ ಆಪತ್ತು ಎಂದು ಹೇಳಿದ್ದು, ಮಾನವ ಹಕ್ಕುಗಳ ಅಸ್ತಿತ್ವಕ್ಕೆ ಮಾರಕವಾಗಿರುವ ಭಯೋತ್ಪಾದನೆ ಬಗ್ಗೆ ಬೂಟಾಟಿಕೆಯ ಮಾತುಗಳು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಪಾಕಿಸ್ತಾನ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಬುರ್ಹಾನ್ ವನಿಯ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಹೇಳಿದ ನಂತರ ಮಹಾಸಭೆಯಲ್ಲಿ ಮಾತನಾಡಿರುವ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಎಂಜೆ ಅಕ್ಬರ್, " ಮಾನವ ಹಕ್ಕುಗಳಿಗೆ ಭಯೋತ್ಪಾದನೆ ದೊಡ್ಡ ಮಾರಕ, ಭಯೋತ್ಪಾದನೆಯಲ್ಲಿ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂಬುದಿಲ್ಲ. ಇರುವುದೊಂದೇ ಭಯೋತ್ಪಾದನೆ. ಇದಕ್ಕೆ ನಮಗೆ ಉತ್ತರ ಗೊತ್ತಿಲ್ಲವೆಂದಾದರೆ, ಭಯೋತ್ಪಾದನೆಯ ಸಂತ್ರಸ್ತರನ್ನು ಅದರಿಂದ ಉಂಟಾದ ಹಾನಿಯಿಂದ ನಿರಾಶ್ರಿತರಾದವರನ್ನು ಕೇಳಿ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂಬ ವರ್ಗಿಕರಣವನ್ನು ಒಪ್ಪುತ್ತಾರೋ ಇಲ್ಲವೋ ಹೋಗಿ ಕೇಳಿ" ಎಂದು ಹೇಳಿದ್ದಾರೆ.
ಇದೇ ವೇಳೆ ಬಾಂಗ್ಲಾದೇಶದ ಸ್ವಾತಂತ್ರ್ಯ ಚಳುವಳಿಯನ್ನು ಪ್ರಸ್ತಾಪಿಸಿರುವ ಎಂಜೆ ಅಕ್ಬರ್, 1.2 ಮಿಲಿಯನ್ ಗೂ ಹೆಚ್ಚು ಜನರು ಭಾರತದಲ್ಲಿ ಆಶ್ರಯ ಪಡೆದಿದ್ದರು. ಭಾರತ ಅನೇಕ ನಿರಾಶ್ರಿತರಿಗೆ ಎಂದಿಗೂ ಆಶ್ರಯ ನೀಡಿದೆ. ಇಂತಹ ಘಟನೆಗಳ ಸಾಲು ಸಾಲು ಅನುಭವಗಳನ್ನು ಹೊಂದಿದ್ದು ಸಂದರ್ಭಕ್ಕೆ ತಕ್ಕಂತೆ ವರ್ತಿಸಿದೆ ಎಂದು ಎಂಜೆ ಅಕ್ಬರ್ ಭಾರತದ ವಿರುದ್ಧ ಪಾಕಿಸ್ತಾನ ಮಾಡಿದ್ದ ಮಾನವ ಹಕ್ಕು ಉಲ್ಲಂಘನೆ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.