ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಉರಿಯ ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದ ಪಶ್ಚಿಮ ಬಂಗಾಳದ ಇಬ್ಬರು ಸೈನಿಕರ ಕುಟುಂಬದವರಿಗೆ ಕೇವಲ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಬೇಕಾಯಿತು.
ಸಿಪಾಯ್ ಗಂಗಾಧರ್ ದೊಲೈ ಮತ್ತು ಸಿಪಾಯಿ ಬಿಸ್ವಜಿತ್ ಗೊರೈ ಕುಟುಂಬದವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಗೃಹ ರಕ್ಷಕ ಕೆಲಸ ನೀಡುವುದಾಗಿ ಮುಖ್ಯಮಂತ್ರಿಯವರ ಕಚೇರಿಯ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಘೋಷಣೆ ಮಾಡಲಾಗಿತ್ತು. ಅದಕ್ಕೆ ಟ್ವಿಟ್ಟರಾಟಿಗಳು ಪ್ರತಿಕ್ರಿಯಿಸಿ ಮಾರ್ಟಿರ್ಸ್ ಆರ್ ನಾಟ್ ಬೆಗ್ಗರ್ಸ್ ಎಂಬ ಹ್ಯಾಶ್ ಟಾಗ್ ನೊಂದಿಗೆ 5 ವರ್ಷಗಳ ಹಿಂದೆ ಸೇಂದಿ ದುರಂತದಲ್ಲಿ ಬಲಿಯಾದವರು ಮತ್ತು ಹಜ್ ಯಾತ್ರೆಯ ಕಾಲ್ತುಳಿತಕ್ಕೆ ಸಿಕ್ಕಿ ಮೃತಪಟ್ಟವರ ಕುಟುಂಬದವರಿಗೆ ನೀಡಿದ ಪರಿಹಾರವನ್ನು ಹೋಲಿಕೆ ಮಾಡಿ ಟ್ವೀಟ್ ನ ಸುರಿಮಳೆಗೈದಿದ್ದಾರೆ.
ಪಶ್ಚಿಮ ಬಂಗಾಳದ ದಕ್ಷಿಣ ಪರ್ಗಾನಾ ಜಿಲ್ಲೆಯಲ್ಲಿ 2011ರಲ್ಲಿ ವಿಷಪೂರಿತ ಸೇಂದಿ ಸೇವಿಸಿ ಸುಮಾರು 150ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಆಗ ಮಮತಾ ಬ್ಯಾನರ್ಜಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಮಯ. ಸತ್ತವರ ಕುಟುಂಬದವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು. ಇನ್ನು ಹಜ್ ಯಾತ್ರೆ ವೇಳೆ ಕಳೆದ ವರ್ಷ ಮದೀನಾದಲ್ಲಿ ಕಾಲ್ತುಳಿತವಾದವರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು.
ಹಜ್ ಯಾತ್ರೆ ವೇಳೆ ಮೃತಪಟ್ಟವರಿಗೂ, ಉರಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೂ ನೀಡಲಾದ ಪರಿಹಾರವನ್ನು ಹೋಲಿಕೆ ಮಾಡಿರುವ ಜನರು ಮಮತಾ ಬ್ಯಾನರ್ಜಿಯವರು ರಾಜಕೀಯವಾಗಿ ತಾರತಮ್ಯ ಮಾಡುತ್ತಿದ್ದಾರೆ. ಅವರ ಪರಿಹಾರ ಘೋಷಣೆ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ರಾಹುಲ್ ಮಹಾಜನ್ ಜವಾನರ ವಿಮಾ ಮೊತ್ತವನ್ನು 1 ಕೋಟಿ ರೂಪಾಯಿಗೆ ಹೆಚ್ಚಿಸಬೇಕೆಂದು ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ಹೀಗೆ ಜನರಿಂದ ಟೀಕೆ, ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಹಾರ ಮೊತ್ತವನ್ನು 5 ಲಕ್ಷ ರೂಪಾಯಿಯಿಂದ 11 ಲಕ್ಷ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics