ನವದೆಹಲಿ: ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಭಯೋತ್ಪಾದಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನಿ ನಟರು ಕೂಡಲೇ ದೇಶವನ್ನು ತೊರೆಯಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಹೇಳಿದೆ.
ಎಂಎನ್ಎಸ್ ನ ಅಂಗ ಸಂಸ್ಥೆಯಾಗಿರುವ ಚಿತ್ರಪಟ್ ಸೇನಾದ ನಾಯಕ ಅಮೇಯ್ ಖೋಪ್ಕಾರ್, ಭಾರತದಲ್ಲಿರುವ ಪಾಕಿಸ್ತಾನದ ನಟರು ಸಾಧ್ಯವಾದಷ್ಟು ಬೇಗ ಭಾರತವನ್ನು ತೊರೆಯುವಂತೆ ಆಗ್ರಹಿಸಿದ್ದಾರೆ. ಪಾಕಿಸ್ತಾನಿ ನಟರಿಗೆ ದೇಶ ತೊರೆಯಲು 48 ಗಂಟೆಗಳ ಅವಕಾಶ ನೀಡಲಾಗಿದ್ದು, ಒಂದು ವೇಳೆ ಗಡುವು ಮುಕ್ತಾಯಗೊಂಡರೂ ಭಾರತದಲ್ಲೇ ಉಳಿಯುವ ಪಾಕ್ ಕಲಾವಿದರನ್ನು ಎಂಎನ್ಎಸ್ ಭಾರತದಿಂದ ಹೊರದೂಡುವುದಾಗಿ ಎಚ್ಚರಿಕೆ ನೀಡಿದೆ. ಕಾಶ್ಮೀರದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 18 ಯೋಧರು ಮೃತಪಟ್ಟಿದ್ದು, ದಾಳಿಯನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಖಂಡಿಸಿವೆ. ಈ ಹಿಂದೆ ಪಾಕಿಸ್ತಾನಿ ಗಜಲ್ ಗಾಯಕ ಘುಲಾಂ ಅಲಿ ಭಾರತದಲ್ಲಿ ಗಾನಗೋಷ್ಠಿ ನಡೆಸುವುದಕ್ಕೆ ಹಲವು ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದ್ದವು.