ದೇಶ

ಜೈಶ್-ಇ-ಮೊಹಮ್ಮದ್ ಸಂಘಟನೆಯ 2 ಮಾಹಿತಿದಾರರ ಬಂಧನ: ಸೇನೆ ಮಾಹಿತಿ

Manjula VN

ಶ್ರೀನಗರ: ಜೈಶ್-ಇ -ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿ ಸಹಾಯ ಮಾಡುತ್ತಿದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಿರುವುದಾಗಿ ಸೇನಾ ಮೂಲಗಳು ಮಾಹಿತಿ ನೀಡಿವೆ.

ಉರಿ ಉಗ್ರ ದಾಳಿ ಬಳಿಕ ಸೇನೆ ಹಾಗೂ ಬಿಎಸ್ಎಫ್ ಯೋಧರು ಸೆಪ್ಟೆಂಬರ್ 21 ರಿಂದಲೂ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೂಲದ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ವಿಚಾರಣೆ ವೇಳೆ ಇಬ್ಬರು ಶಂಕಿತರು ಕೆಲ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದು, 2 ವರ್ಷಗಳ ಹಿಂದೆ ಜೈಶ್-ಇ-ಮೊಹಮ್ಮದ್ ಸಂಘಟನೆ ನೇಮಕ ಮಾಡಿಕೊಂಡಿತ್ತು. ಉರಿ ಸೆಕ್ಟರ್ ನಲ್ಲಿರುವ ಗಡಿಯನ್ನು ದಾಟುವ ಕುರಿತಂತೆ ಸಂಘಟನೆಗೆ ಮಾಹಿತಿಯನ್ನು ನೀಡುತ್ತಿದ್ದೆವು ಎಂದು ಹೇಳಿದ್ದಾರೆ. ಶಂಕಿತರು ನೀಡಿರುವ ಮಾಹಿತಿಯನ್ನು ಭದ್ರತಾ ಸಂಸ್ಥೆಗಳಿಗೆ ರವಾನೆ ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ, ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT