ನವದೆಹಲಿ: ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ನಿರೀಕ್ಷಣಾ ಜಾಮೀನಿಗಾಗಿ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಉಚ್ಚಾಟಿತ ಎಐಎಡಿಎಂಕೆ ಸಂಸದೆ ಶಶಿಕಾಲ ಪುಷ್ಪಾ ಅವರಿಗೆ ತನಿಖೆಗೆ ಸಹಕರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.
ಆಗಸ್ಟ್ 26ರಂದು ಸಂಸದೆಯನ್ನು ಬಂಧಿಸದಂತೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮುಂದುವರೆಸಿದ್ದು, ಶಶಿಕಲಾ ಅವರು ಅಕ್ಟೋಬರ್ 3ರಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿರುವ ತೂತಕುಡಿ ಪೊಲೀಸ್ ಠಾಣೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದೆ.
ಈ ವೇಳೆ ಶಶಿಕಲಾ ಪರ ವಕೀಲರು ತಮಿಳುನಾಡಿನಲ್ಲಿ ತಮ್ಮ ಕಕ್ಷಿದಾರರಿಗೆ ಜೀವ ಬೆದರಿಕೆ ಇದೆ ಎಂದು ಹೇಳಿದರು. ಇದನ್ನು ಪರಿಗಣಿಸಿದ ಕೋರ್ಟ್, ತಮಿಳುನಾಡು ಪೊಲೀಸರು ಆರೋಪಿಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ವಿಚಾರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೆನ್ ರಾವಲ್ ಅವರು, ವಿಚಾರಣೆಗೆ ಹಾಜರಾಗುವ ಆರೋಪಿಗೆ ತಮಿಳುನಾಡು ಸರ್ಕಾರ ಎಲ್ಲಾ ರೀತಿಯ ಭದ್ರತೆ ಒದಗಿಸಲಿದೆ ಎಂದು ಭರವಸೆ ನೀಡಿದರು.
ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಶಶಿಕಲಾ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು, ಆದರೆ ಈ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದರು.
ಉಚ್ಚಾಟಿತ ಎಐಎಡಿಎಂಕೆ ನಾಯಕಿ ಶಶಿಕಲಾ ಪುಷ್ಪ ಹಾಗೂ ಅವರ ಪತಿ ಮತ್ತು ಪುತ್ರನ ವಿರುದ್ಧ ಪೊಲೀಸರು ಲೈಂಗಿಕ ಕಿರುಕುಳದ ಕೇಸ್ ದಾಖಲಿಸಿದ್ದಾರೆ.