ವಿರುಧುನಗರ್ : ಗ್ರಾಹಕರನ್ನು ಆಕರ್ಷಿಸಲು ಕಂಪನಿಗಳು ಸದಾ ಒಂದಲ್ಲ ಒಂದು ಹೊಸ ಹೊಸ ಪ್ರಯತ್ನ ಮಾಡುತ್ತಿರುತ್ತವೆ.
ಈ ಬಾರಿ ದೀಪಾವಳಿಗೆ ಗ್ರಾಹಕರನ್ನು ಆಕರ್ಷಿಸಲು ಜನಕ್ಕೆ ಹೆಚ್ಚು ಪರಿಚಿತವಾಗಿರುವ ಸಾಮಾಜಿಕ ಜಾಲತಾಣಗಳ ಹೆಸರಿನ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಈ ವರ್ಷ ಟ್ವಿಟ್ಟರ್, ಫೇಸ್‌ಬುಕ್, ಸೆಲ್ಫಿ, ಸ್ಕೈಪ್ ಹೆಸರಿನಲ್ಲಿ ಪಟಾಕಿಗಳನ್ನು ತಯಾರಿಸಲಾಗಿದ್ದು, ಅವುಗಳು ವಿಭಿನ್ನ ರೀತಿಯಲ್ಲಿ ಬೆಳಕು ಸೂಸುತ್ತವೆ.
ಮಕ್ಕಳಿಗೆ ಹಾಗೂ ಯುವಜನತೆಗೆ ಹೆಚ್ಚು ಇಷ್ಟವಾಗುವಂತೆ ವಿನ್ಯಾಸಪಡಿಸಲಾಗಿದೆ. ವಿರುಧುನಗರ್ ನಲ್ಲಿ ಸುಮಾರು 800 ಪಟಾಕಿ ಕಾರ್ಖಾನೆಗಳಿವೆ. ಇಡೀ ದೇಶದಲ್ಲೇ ಅತಿ ಹೆಚ್ಚು ಪಟಾಕಿಯನ್ನು ಇಲ್ಲಿಯೇ ಉತ್ಪಾದಿಸಲಾಗುತ್ತದೆ. ಈ ಕಾರ್ಖಾನೆಗಳಲ್ಲಿ ಪ್ರತಿ ವರ್ಷ ಹೊಸ ಹೊಸ ಮಾದರಿಯ ಪಟಾಕಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ.
ಟ್ವಿಟ್ಟರ್ , ಫೇಸ್‌ಬುಕ್, ಸೆಲ್ಫಿ, ಸ್ಕೈಪ್ ಹೆಸರಿನಲ್ಲಿ ಪಟಾಕಿಗಳನ್ನು ತಯಾರಿಸುವ ಯೋಜನೆಯನ್ನು ತಮ್ಮ ಸಂಬಂಧಿ ನೀಡಿದರು ಎಂದು ಶಿವಕಾಶಿ ತಾಲೂಕಿನ ಅಲಮಾರುತಪಟ್ಟಿ ಗ್ರಾಮದಲ್ಲಿರುವ ಶ್ರೀಧರ ಪಟಾಕಿ ಕಾರ್ಖಾನೆ ಮಾಲೀಕ ಮಾದಸ್ವಾಮಿ ಹೇಳುತ್ತಾರೆ.
ತಮ್ಮ ಸಂಬಂಧಿ ಹಾಗೂ ಶ್ರೀಧರ ಪಟಾಕಿ ಕಾರ್ಖಾನೆ ಮ್ಯಾನೇಜರ್ ಪಾಂಡಿ, ಯುವಕರನ್ನು ಆಕರ್ಷಿಸಲು ಪಟಾಕಿಗಳಿಗೆ ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್ , ಹೈಕ್ ಮತ್ತು ಸ್ಕೈಪ್, ಸೆಲ್ಫೀ ಹೆಸರಿಡುವಂತೆ ಸೂಚಿಸಿದ್ದಾಗಿ ಹೇಳಿದ್ದರು ಎಂದು ಮಾದಸ್ವಾಮಿ ತಿಳಿಸಿದ್ದಾರೆ.
ಈ ಹೊಸ ರೀತಿಯ ಪಟಾಕಿಗಳ ವಿಶೇಷತೆ ಬಗ್ಗೆ ಅವರು ವಿವರಿಸಿದ್ದಾರೆ. ಈ ಮೊದಲಿನ ಪಟಾಕಿಗಳಲ್ಲಿ ಸಿಂಗಲ್ ಶಾಟ್ಸ್ ಇದ್ದವು. ಅವು ಆಕಾಶಕ್ಕೆ ಹೋಗಿ ಒಂದು ಬಾರಿ ಅಲಿಲ ವಿಭಿನ್ನ ಬೆಳಕಿನ ವಿನ್ಯಾಸ ಮೂಡಿಸುತ್ತಿದ್ದವು. ಆದರೆ ಈ ಬಾರಿ ಈ ಪಟಾಕಿಗಳಲ್ಲಿ 7 ಶಾಟ್ಸ್ ಗಳಿದ್ದು, ಆಕಾಶದಲ್ಲಿ ದೊಡ್ಡ ಮಟ್ಟದ ಹೂವಿನ ವಿನ್ಯಾಸ ನಿರ್ಮಾಣ ಮಾಡುತ್ತದೆ ಎಂದು ವಿವರಿಸಿದ್ದಾರೆ.
ಈ ಪಟಾಕಿಗಳು ವಿವಿಧ ಗಾತ್ರದಲ್ಲಿದ್ದು, 1.5 ಇಂಚು, ಎರಡು ಇಂಚು. ಹಾಗೂ 3.5 ಇಂಚು ಗಾತ್ರದಲ್ಲಿವೆ. ಇದರ ಬೆಲೆ 250 ರೂ ನಿಂದ 750 ರೂ ಗಳ ವರೆಗೂ ವಿವಿಧ ರೀತಿಯ ಬೆಲೆಗಳಿವೆ ಎಂದು ಹೇಳಿದ್ದಾರೆ.