ನವದೆಹಲಿ: ಸಿಂಧೂ ನದಿ ಜಲ ಒಪ್ಪಂದವನ್ನು ಪರಾಮರ್ಶಿಸುವ ಬಗ್ಗೆ ಸಭೆ ನಡೆಸಿದ ಬಳಿಕ ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೀಡಿರುವ ಆಪ್ತ ರಾಷ್ಟ್ರ ಸ್ಥಾನವನ್ನು ಹಿಂಪಡೆಯುವುದರ ಬಗ್ಗೆ ಸಭೆ ನಿಗದಿಯಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಈ ಸಭೆಯನ್ನು ಮುಂದೂಡಿದ್ದಾರೆ.
ಪಾಕಿಸ್ತಾನಕ್ಕೆ ಭಾರತ ನೀಡಿರುವ ಅತ್ಯಂತ ನೆಚ್ಚಿನ ರಾಷ್ಟ್ರ ಸ್ಥಾನದ ಬಗ್ಗೆ ಪರಾಮರ್ಶೆ ನಡೆಸಲು ಸೆ.29 ರಂದು ಪ್ರಧಾನಿ ನರೇಂದ್ರ ಮೋದಿ ಉನ್ನತಮಟ್ಟದ ಸಭೆ ನಡೆಸಲಿದ್ದು, ವಾಣಿಜ್ಯ ಸಚಿವಾಲಯ, ವಿದೇಶಾಂಗ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಪಾಕ್ ಗೆ ಆಪ್ತ ರಾಷ್ಟ್ರ ಸ್ಥಾನ ಹಿಂಪಡೆಯುವುದರ ಬಗ್ಗೆ ನಡೆಯಲಿದ್ದ ಸಭೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಿದ್ದಾರೆ.
ಸೆ.26 ರಂದು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಾಮರ್ಶಿಸಿದ್ದ ಪ್ರಧಾನಿ ನರೇಂದ್ರ ಮೋದಿ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನೆ ಮಾಡಿದ್ದರು. ಈಗ ಸೇನಾ ದಾಳಿಯ ಮೂಲಕ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ನೀಡಿ, ಪಾಕ್ ಗೆ ನೀಡಿದ್ದ ಆಪ್ತ ರಾಷ್ಟ್ರ ಸ್ಥಾನವನ್ನು ಹಿಂಪಡೆಯುವ ಬಗ್ಗೆ ನಡೆಯಲಿರುವ ಸಭೆಯನ್ನು ಮುಂದೂಡಿದೆ.