ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ಕಾನೂನು ಶುಲ್ಕ ರೂ.3.42 ಕೋಟಿ ವಿವಾದ ಸಂಬಂಧ ಹಲವಾರು ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗುತ್ತಿದ್ದರೂ, ಈ ವರೆಗೂ ಮೌನವಹಿಸಿದ್ದ ಕೇಜ್ರಿವಾಲ್ ಅವರು ಇದೀಗ ತಮ್ಮ ಮೌನವನ್ನು ಮುರಿದು ವಿವಾದ ಸಂಬಂಧ ಬುಧವಾರ ಮಾತನಾಡಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿಯವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಹೋರಾಟಕ್ಕೆ ತಗುಲಿರುವ ರೂ.3.42 ಕೋಟಿ ವಕೀಲರ ಶುಲ್ಕವನ್ನು ನನ್ನ ಪಾಕೆಟ್ ನಿಂದ ಪಾವತಿಸಬೇಕೇ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಶ್ನಿಸಿದ್ದಾರೆ.
ಈಶಾನ್ಯ ದೆಹಲಿಯ ಸೀಮಾಪುರಿಯಲ್ಲಿ ನಡೆದ ರ್ಯಾಲಿಯಲ್ಲಿ ವಿವಾದ ಸಂಬಂಧ ಮಾತನಾಡಿರುವ ಅವರು, ಕ್ರಿಕೆಟ್ ನಲ್ಲಿ ಬಹಳ ದೊಡ್ಡದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ಡಿಡಿಸಿಎ (ದೆಹಲಿ ಕ್ರಿಕೆಟ್ ಸಂಸ್ಥೆ) ಬಗ್ಗೆ ನೀವು ಕೇಳಿರಬಹುದು. ಆಯ್ಕೆ ಮಾಡುವ ವೇಳೆ ಅಧಿಕಾರಿಗಳು ಹಣವನ್ನು ಕೇಳುತ್ತಿದ್ದಾರೆಂದು ಹಲವು ಯುವಕರು ದೂರು ನೀಡುತ್ತಿದ್ದರು. ಹೀಗಾಗಿ ನಾನು ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದೆ.
ಆದರೆ, ಬಿಜೆಪಿಯವರು ನನ್ನ ವಿರುದ್ಧವೇ ಪ್ರಕರಣವನ್ನು ದಾಖಲಿಸಿದರು. ಹೀಗಾಗಿ ನಾವು ಉನ್ನತ ಮಟ್ಟದ ವಕೀಲರಾದ ರಾಮ್ ಜೇಠ್ಮಲಾನಿಯವರನ್ನು ನೇಮಿಸಿದೆವು. ಇದೀಗ ಸರ್ಕಾರವೇಕೆ ಕಾನೂನು ಶುಲ್ಕವನ್ನು ಪಾವತಿ ಮಾಡಬೇಕೆಂದು ಪ್ರಶ್ನಿಸುತ್ತಿದ್ದಾರೆ. ನನ್ನ ಪಾಕೆಟ್ ನಿಂದ ಶುಲ್ಕವನ್ನು ಪಾವತಿ ಮಾಡಬೇಕೇ...? ಎಂದು ಪ್ರಶ್ನಿಸಿದರು.
ಇದೇ ವೇಳೆ ಬಿಜೆಪಿ ವಿರುದ್ದ ಕಿಡಿಕಾರಿದ ಅವರು, ಭ್ರಷ್ಟಾಚಾರದ ವಿರುದ್ದವಿರುವ ನಮ್ಮ ಹೋರಾಟವನ್ನು ದುರ್ಬಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಜ್ರಿವಾಲ್ ವಿರುದ್ದ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ, ಕೇಜ್ರಿವಾಲ್ ಪರವಾಗಿ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ವಾದ ಮಂಡಿಸುತ್ತಿದ್ದಾರೆ.
ನ್ಯಾಯಾಲಯದಲ್ಲಿ ಕೇಜ್ರಿವಾಲ್ ಅವರನ್ನು ಪ್ರತಿನಿಧಿಸಿದ್ದ ಜೇಠ್ಮಲಾನಿ 2016 ಡಿಸೆಂಬರ್ 1 ರಂದು, 1 ಕೋಟಿ ರೂ. ಬಿಲ್ ಕಳುಹಿಸಿದ್ದರು. ನಂತರ ಪ್ರತಿ ಬಾರಿ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದ್ದಕ್ಕೆ 22 ಲಕ್ಷ ರೂ. ಶುಲ್ಕ ವಿಧಿಸಿದ್ದಾರೆ. ಈವರೆಗೆ ಜೇಠ್ಮಲಾನಿ 11 ಬಾರಿ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದ್ದು, ಇದರ ಒಟ್ಟು ರೂ.3.42 ಕೋಟಿಯಾಗಿದೆ.
ಜೇಠ್ಮಲಾನಿ ಅವರು ಕಳುಹಿಸಿದ್ದ ಬಿಲ್ ಮೊತ್ತವನ್ನು ಭರಿಸಲಾಗಿದೆ ಎಂದು ಕಡತದ ಮೇಲೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬರೆದಿದ್ದರು. ಈ ಬಿಲ್ ಗೆ ಅನುಮೋದನೆ ನೀಡಲಾಗದು, ಇದಕ್ಕೆ ಲೆಫ್ಟಿನೆಂಟ್ ಗವರ್ನರ್ ಸಮ್ಮತಿಸಬೇಕು ಎಂದು ಕಾನೂನು ಇಲಾಖೆ 2016 ಡಿ.7ರಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಸೋಡಿಯಾ ಅವರು, ಎಲ್ ಜಿ ಅನುಮತಿ ಬೇಡ, ಸಂಬಂಧಪಟ್ಟ ಇಲಾಖೆಯ ಅನುಮತಿ ಇದ್ದರೆ ಸಾಕು ಎಂದು ಹೇಳಿದ್ದರು. ಇದರಂತೆ ಜೇಟ್ಲಿಯವರು ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ತಗುಲುತ್ತಿರುವ ಕಾನೂನು ಶುಲ್ಕವನ್ನು (ದೆಹಲಿ ಸರ್ಕಾರ ಅಥವಾ ಕೇಜ್ರಿವಾಲ್) ಯಾರು ಪಾವತಿ ಮಾಡಬೇಕೆಂಬುದರ ಬಗ್ಗೆ ಇದೀಗ ವಿವಾದ ಆರಂಭವಾಗಿದೆ.