ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆ ಕುರಿತು ಸಮೀಕ್ಷೆಯ ವರದಿಯೊಂದನ್ನು ಕೇಂದ್ರ ಸರ್ಕರ ಬಹಿರಂಗಪಡಿಸಿದ್ದು, ಕಟ್ಟಗಳ ಒಳಗೇ ಹೆಚ್ಚು ಕಾಲ್ ಡ್ರಾಪ್ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದೆ.
2016 ರ ಡಿಸೆಂಬರ್ ನಲ್ಲಿ ದೆಹಲಿ, ಮುಂಬೈ, ಉತ್ತರ ಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ ಹಾಗು ಗೋವಾಗಳಲ್ಲಿ ಟೆಲಿಕಾಂ ಇಲಾಖೆ (ಡಿಒಟಿ) ಐವಿಆರ್ ಎಸ್ ವ್ಯವಸ್ಥೆಯನ್ನು ಪ್ರಾರಂಭಿಸಿ ಕಾಲ್ ಡ್ರಾಪ್ ಸಮಸ್ಯೆಗಳ ಬಗ್ಗೆ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯುವ ಕೆಲಸ ಪ್ರಾರಂಭಿಸಿತ್ತು.
2016 ರ ಡಿಸೆಂಬರ್ ನಿಂದ 2017 ರ ಫೆಬ್ರವರಿ 28 ವರೆಗೆ ದೇಶಾದ್ಯಂತ ಎಲ್ಲಾ ಆಪರೇಟರ್ ಗಳ ಗ್ರಾಹಕರಿಗೆ ಸುಮಾರು 16,61,640 ಯಶಸ್ವಿ ಔಟ್ ಬೌಂಡ್ ಕರೆಗಾನ್ನು ಮಾಡಲಾಗಿದೆ. ಸುಮಾರು 2,20,935 ಗ್ರಾಹಕರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದು 1,38,072 (ಶೇ.62.5) ರಷ್ಟು ಗ್ರಾಹಕರು ಕಾಲ್ ಡ್ರಾಪ್ ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಗ್ರಾಹಕರಿಂದ ಪಡೆಯಲಾದ ಪ್ರತಿಕ್ರಿಯೆಯಲ್ಲಿ ಕಟ್ಟಡಗಳ ಒಳಗೇ ಹೆಚ್ಚು ಕಾಲ್ ಡ್ರಾಪ್ ಸಮಸ್ಯೆ ಎದುರಾಗುತ್ತಿದೆ ಎಂಬ ಅಂಶ ಬಹಿರಂಗವಾಗಿದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ.
ಈ ವ್ಯವಸ್ಥೆ ಮೂಲಕ ಗ್ರಾಹಕರಿಗೆ ಐವಿಆರ್ ಎಸ್ ಕರೆ ಸ್ವೀಕರಿಸುತ್ತಾರೆ ಹಾಗೂ ಕಾಲ್ ಡ್ರಾಪ್ ಸಮಸ್ಯೆ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಷ್ಟೇ ಅಲ್ಲದೇ 1955 ಟೋಲ್ ಫ್ರೀ ನಂಬರ್ ಗೆ ಗ್ರಾಹಕರು ತಾವು ವಾಸಿಸುವ ನಗರ, ಗ್ರಾಮದ ಹೆಸರನ್ನು ನಮೂದಿಸಿ ಎಸ್ಎಂಎಸ್ ಕಳಿಸಿ ಕಾಲ್ ಡ್ರಾಪ್ ಸಮಸ್ಯೆ ಬಗ್ಗೆ ಮಾಹಿತಿ ನೀಡಬಹುದಾಗಿದೆ. ಗ್ರಾಹಕರಿಂದ ದೂರನ್ನು ಸಂಬಂಧಪಟ್ಟ ಟೆಲಿಕಾಂ ಸೇವೆಯನ್ನು ನೀಡುವ ಸಂಸ್ಥೆಗಳ ಗಮನಕ್ಕೆ ತಂದು ನಿರ್ದಿಷ್ಟ ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಟೆಲಿಕಾಂ ಇಲಾಖೆಯ ಪ್ರಕಟಣೆ ತಿಳಿಸಿದೆ.