ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಮಸೂದೆ( ಜಿಎಸ್ ಟಿ)ಗೆ ಸಂಬಂಧಿಸಿದ 4 ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಜು.1 ರಿಂದ ಜಿಎಸ್ ಟಿ ಕಾಯ್ದೆ ಜಾರಿಗೆ ಬರಲಿದೆ.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಸಿ.ಜಿ.ಎಸ್.ಟಿ) ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ (ರಾಜ್ಯಗಳಿಗೆ ಪರಿಹಾರ ನೀಡುವ ಮಸೂದೆ)-2017 ಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.
ಕೇಂದ್ರ ಮತ್ತು ಏಕೀಕೃತ ಜಿಎಸ್ ಟಿ ಮಸೂದೆಯು ದೇಶವ್ಯಾಪಿ ಏಕರೂಪದ ದಂಡ ಮತ್ತು ತೆರಿಗೆ ಸಂಗ್ರಹಿಸುವ ಕಾನೂನಾಗಿದ್ದು, ಜಿಎಸ್ ಟಿ ಪರಿಹಾರ ಮಸೂದೆಯೂ ಜಿಎಸ್ ಟಿ ಜಾರಿ ಬಳಿಕ ರಾಜ್ಯ ಸರ್ಕಾರಗಳಿಗಾಗುವ ನಷ್ಟವನ್ನು ಭರಿಸುವ ಮತ್ತು ಪರಿಹಾರ ನೀಡುವ ಮಸೂದೆಯಾಗಿದೆ. ಇದು ಕೇಂದ್ರಾಡಳಿತ ಪ್ರದೇಶಕ್ಕೂ ಅನ್ವಯವಾಗಲಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಚಿವ ಸಂಪುಟದ ಅನುಮೋದನೆ ಪಡೆದು ಮಾರ್ಚ್ 27 ರಂದು ಲೋಕಸಭೆಯಲ್ಲಿ ಈ ನಾಲ್ಕು ಜಿಎಸ್ ಟಿ ಮಸೂದೆಗಳನ್ನು ಮಂಡಿಸಿದ್ದರು. ಜಿಎಸ್ ಟಿ ಜಾರಿಯ (ಜುಲೈ.1 ರಿಂದ) ಒಳಗಾಗಿ ಈ ಮಸೂದೆಗಳನ್ನು ರಾಜ್ಯದ ವಿಧಾನಸಭೆಗಳಲ್ಲೂ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ. ಜಿಎಸ್ ಟಿ ಜಾರಿಯಿಂದ ಆರ್ಥಿಕ ಬೆಳವಣಿಗೆ ಶೇ.0.5 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.