ನವದೆಹಲಿ: ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ವಿಮಾನಯಾನಕ್ಕೆ ವಿಧಿಸಿದ್ದ ನಿಷೇಧವನ್ನು ಸುಮಾರು ಎರಡು ವಾರಗಳ ನಂತರ ನಾಲ್ಕು ಪ್ರಮುಖ ವಿಮಾಯಾನ ಸಂಸ್ಥೆಗಳನ್ನೊಳಗೊಂಡ ಭಾರತೀಯ ವಿಮಾನಯಾನ ಸಂಸ್ಥೆಗಳ ಒಕ್ಕೂಟ(ಎಫ್ಐಎ) ಶನಿವಾರ ಹಿಂಪಡೆದಿದೆ.
ಏರ್ ಇಂಡಿಯಾ ರವೀಂದ್ರ ಗಾಯಕ್ವಾಡ್ ಮೇಲಿನ ನಿಷೇಧ ತೆರವುಗೊಳಿಸಿದ ನಂತರ ಇದೀಗ ನಿಷೇಧವನ್ನು ಬೆಂಬಲಿಸಿದ್ದ ಜೆಟ್ ಏರ್ ವೇಯ್ಸ್, ಸ್ಪೈಸ್ ಜೆಟ್, ಗೋ ಏರ್ ಹಾಗೂ ಇಂಡಿಗೋ ಸಹ ಇಂದು ಸಂಸದನ ಮೇಲಿನ ನಿಷೇಧವನ್ನು ತೆರವುಗೊಳಿಸಿವೆ.
ಏರ್ ಇಂಡಿಯಾ ಸಂಸದನ ಮೇಲಿನ ನಿಷೇಧ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳ ಒಕ್ಕೂಟ ಸಹ ನಿಷೇಧ ತೆರವುಗೊಳಿಸಿದೆ ಎಂದು ಎಫ್ಐಎ ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ಗಾಯಕ್ವಾಡ್ ಅವರು ವಿಷಾದ ವ್ಯಕ್ತಪಡಿಸಿ ಗುರುವಾರ ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿ ರಾಜು ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸಂಸದನ ವಿಮಾಯಾನ ನಿಷೇಧವನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ಏರ್ ಇಂಡಿಯಾಗೆ ಸೂಚಿಸಿತ್ತು. ಬಳಿಕ ಏರ್ ಇಂಡಿಯಾ ಸಂಸದನ ಮೇಲಿನ ನಿಷೇಧ ಹಿಂಪಡೆದಿತ್ತು.
ಮಾರ್ಚ್ 23ರಂದು ಪುಣೆ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಗಾಯಕ್ವಾಡ್ ಅವರು ಏರ್ ಇಂಡಿಯಾ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಥಳಿಸಿದ್ದರು. ಈ ಪ್ರಕರಣ ಲೋಕಸಭೆಯಲ್ಲೂ ಪ್ರತಿಧ್ವನಿಸಿತ್ತು. ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಅಭಿಪ್ರಾಯದ ಬಳಿಕ ಸಂಸದ ರವೀಂದ್ರ ಗಾಯಕ್ವಾಡ್ ಪ್ರಕರಣ ಸಂಬಂಧ ವಿಷಾದ ವ್ಯಕ್ತಪಡಿಸಿದ್ದರು. ಅಶೋಕ್ ಗಜಪತಿ ರಾಜು ಅವರಿಗೆ ಪತ್ರವೊಂದನ್ನು ಬರೆದಿರುವ ಗಾಯಕ್ವಾಡ್ ಅವರು, ತಮ್ಮ ಕಾರ್ಯದಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗಿದ್ದರೆ ತಾವು ವಿಷಾಧ ವ್ಯಕ್ತಪಡಿಸುವುದಾಗಿ ಹೇಳಿದ್ದರು.