ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ನವದೆಹಲಿ: ಯುಪಿಎ ಅಧಿಕಾರದ ಅವಧಿಯಲ್ಲಿಯೇ ಕಪ್ಪುಹಣ ಹೆಚ್ಚು ತಲೆಯೆತ್ತಿತ್ತು. ಕಪ್ಪುಹಣದ ಬಗ್ಗೆ ನಮ್ಮ ಸರ್ಕಾರಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರಿಗೆ ತಿಳಿದಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಸೋಮವಾರ ಹೇಳಿದ್ದಾರೆ.
ತಮಿಳುನಾಡು ಆರ್.ಕೆ.ನಗರ ಉಪಚುನಾವಣೆ ರದ್ದು ಕುರಿತಂತೆ ಚಿದಂಬರಂ ಅವರು ನೀಡಿದ್ದ ಹೇಳಿಗೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಕಪ್ಪುಹಣ ಹೇಗೆ ಸೃಷ್ಟಿಯಾಗುತ್ತದೆ ಎಂಬುದರ ಬಗ್ಗೆ ಚಿದಂಬರಂ ಅವರಿಗೆ ಚೆನ್ನಾಗಿ ಗೊತ್ತಿದೆ. ಏಕೆಂದರೆ, ಯುಪಿಎ ಅಧಿಕಾರದ ಅವಧಿಯಲ್ಲಿಯೇ ಕಪ್ಪುಹಣ ಚಾಲ್ತಿಗೆ ಬಂದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವಷ್ಟೇ ಕಪ್ಪುಹಣಕ್ಕೆ ಪರಿಣಾಮಕಾರ ರೀತಿಯಲ್ಲಿ ಹೊಡೆತ ಬಿದ್ದಿತ್ತು ಎಂದು ಹೇಳಿದ್ದಾರೆ.
ಕಪ್ಪು ಹಣದ ವಿರುದ್ಧ ನಮ್ಮ ಸರ್ಕಾರ ಸಾಕಷ್ಟು ಪರಿಶ್ರಮ ಪಡುತ್ತಿದ್ದರೂ. ಕಪ್ಪುಹಣ ಈಗಲೂ ಚಾಲ್ತಿಯಲ್ಲಿದೆ ಎಂದಾದರೆ, ಕಪ್ಪುಹಣವನ್ನು ಜನರಿಗೆ ನೀಡುತ್ತಿರುವ ಪಕ್ಷಗಳೇ ಅದಕ್ಕೆ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.
ಕೇಂದ್ರ ಸರ್ಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ನಾವು ಏನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ? ಇಲಾಖೆಗಳು ತಮ್ಮ ಕೆಲಸವನ್ನು ತಾವು ಮಾಡುತ್ತಿವೆ. ಅದಕ್ಕೆ ನಾವು ಅಭಿನಂದನೆಗಳನ್ನು ಸಲ್ಲಿಸಬೇಕೆಂದು ತಿಳಿಸಿದ್ದಾರೆ.
ಆರ್.ಕೆ.ನಗರ ಉಪ ಚುನಾವಣೆ ರದ್ದುಗೊಂಡ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ನೋಟು ನಿಷೇಧ ಕುರಿತಂತೆ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ರೂ.500 ಹಾಗೂ 1000 ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ಕಪ್ಪುಹಣ ಅಂತ್ಯಗೊಳ್ಳಲಿದೆ ಎಂದು ಮೋದಿ ಸರ್ಕಾರ ಹೇಳಿತ್ತು. ಆರ್.ಕೆ.ನಗರದಲ್ಲಿ ಹಂಚಿದ್ದು, ಕಾನೂನು ಬದ್ಧ ಹಣವೇ ಎಂದು ಪ್ರಶ್ನಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics