ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಜೆಪಿ ಸೇರಲಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ತರೂರ್ ಪ್ರತಿಕ್ರಿಯೆ ನೀಡುವ ಮೂಲಕ ಎಲ್ಲಾ ಊಹಾ ಪೋಹಾಗಳಿಗೂ ತೆರೆ ಎಳೆದಿದ್ದಾರೆ.
ಬಿಜೆಪಿ ಸಿದ್ಧಾಂತಕ್ಕೂ ನನ್ನ ಸಿದ್ಧಾಂತಕ್ಕೂ ಹೊಂದಾಣಿಕೆ ಆಗದ ಕಾರಣ ನಾನು ಬಿಜೆಪಿ ಸೇರುವುದಿಲ್ಲ ಎಂದು ಶಶಿ ತರೂರ್ ಸ್ಪಷ್ಟ ಪಡಿಸಿದ್ದಾರೆ. ಈ ಸಂಬಂಧ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿರುವ ತರೂರ್ ಕಳೆದ 40 ವರ್ಷಗಳಿಂದಲೂ ನಾಗರಿಕರು ಮತ್ತು ಎಲ್ಲಾ ಸಮುದಾಯದವರ ಹಕ್ಕು, ಸಮಾನತೆ ಬಗ್ಗೆ ನಾನು ಮಾತನಾಡಿದ್ದೇನೆ, ಬರೆಯುತ್ತಾ ಬಂದಿದ್ದೇನೆ, ಆ ಮೂಲಕ ಹೋರಾಟ ಮಾಡಿದ್ದೇನೆ, ಹಾಗಾಗಿ ನನ್ನ ತತ್ವ ಸಿದ್ಧಾಂತಗಳ ಜೊತೆ ರಾಜಿ ಮಾಡಿಕೊಂಡು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ತರೂರ್ ಸೇರಿದಂತೆ ನಾಲ್ಕು ಮಂದಿ ಬಿಜೆಪಿ ಸೇರಲಿದ್ದಾರೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೊಡೆಯಿರಿ ಬಾಲಕೃಷ್ಣನ್ ಹೇಳಿದ್ದರು. ಪದೇ ಪದೇ ಬಿಜೆಪಿ ಸೇರುವ ಬಗ್ಗೆ ವದಂತಿಗಳನ್ನು ಹಬ್ಬಿಸಲಾಗುತ್ತಿದೆ, ಅದೆಲ್ಲಾ ಆಧಾರ ರಹಿತವಾದದ್ದು ಎಂದು ತರೂರ್ ಹೇಳಿದ್ದಾರೆ.