ದೇಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ 2019 ರ ಚುನಾವಣೆ: ಎನ್ ಡಿಎ ಸಭೆಯಲ್ಲಿ ನಿರ್ಣಯ

Srinivas Rao BV
ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಯೋಜನೆ ರೂಪಿಸುತ್ತಿರುವ ಬಿಜೆಪಿ ಏ.10 ರಂದು ರಾತ್ರಿ ಎನ್ ಡಿಎ ಸಭೆ ನಡೆಸಿದೆ. ಸುಮಾರು 4 ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿ 2019 ರ ಲೋಕಸಭಾ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಎದುರಿಸಬೇಕೆಂಬ ನಿರ್ಣವನ್ನು ಅಂಗೀಕರಿಸಲಾಗಿದೆ. 
ಎನ್ ಡಿಎ ಸಭೆಯಲ್ಲಿ ಶಿವಸೇನೆ ಸೇರಿದಂತೆ ಬಿಜೆಪಿ ಮಿತ್ರ ಪಕ್ಷಗಳ ನಾಯಕರು ಉಪಸ್ಥಿತರಿದ್ದರು. ಬಿಜೆಪಿಯನ್ನು ಆಗಾಗ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುವ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರೊಂದಿಗೆ ಸಭೆಗೂ ಮುನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, 20 ನಿಮಿಷಗಳ ಕಾಲ ಪ್ರತ್ಯೇಕ ಸಭೆ ನಡೆಸಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. 
ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದ ಬಡವರ ಪರವಾದ ಕಾರ್ಯಸೂಚಿಯನ್ನು ಒತ್ತಿ ಹೇಳಿದ್ದು, ದೇಶದ ಬಡವರ್ಗದ ಜನತೆ ತಮ್ಮ ಸರ್ಕಾರದ ಮೇಲಿಟ್ಟಿರುವ ಭರವಸೆಯನ್ನು ಹುಸಿಯಾಗಲು ಬಿಡಬಾರದು ಎಂದು ಸಚಿವರು, ಎನ್ ಡಿಎ ಮೈತ್ರಿಕೂಟದ ನಾಯಕರಿಗೆ ಕರೆ ನೀಡಿದ್ದಾರೆ. 
ನವ ಭಾರತದ ಅಜೆಂಡಾವನ್ನು ಮುಂದಿಟ್ಟುಕೊಂಡು 2019ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಯುವಜನತೆಯೊಂದಿಗೆ ಹೆಚ್ಚು ಬೆಸೆಯಲು ಮಿತ್ರ ಪಕ್ಷಗಳಿಗೆ ಕರೆ ನೀಡಿದ್ದಾರೆ. ಇದೇ ವೇಳೆ ಚುನಾವಣಾ ಸುಧಾರಣೆಯ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಸುಧಾರಣೆಯನ್ನು ಜಾರಿಗೆ ರಾಜಕೀಯ ಪಕ್ಷಗಳ ನಡುವೆ ಒಮ್ಮತ ಮೂಡಿಸಲು ಎನ್ ಡಿಎ ಮಿತ್ರಪಕ್ಷಗಳು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ. 
SCROLL FOR NEXT