ಜಮ್ಮು-ಕಾಶ್ಮೀರದಲ್ಲಿ ಸಿಆರ್'ಪಿಎಫ್ ಯೋಧನ ಮೇಲೆ ಹಲ್ಲೆ
ಶ್ರೀನಗರ: ಶ್ರೀವಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್'ಪಿಎಫ್) ಯೋಧರೊಬ್ಬರ ಮೇಲೆ ಕಾಶ್ಮೀರ ಯುವಕರು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಏಪ್ರಿಲ್ 9 ರಂದು ಲೋಕಸಭಾ ಕ್ಷೇತ್ರ ಉಪ ಚುನಾವಣೆ ವೇಳೆ ಕರ್ತವ್ಯನಿರ್ವಹಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಯೋಧರೊಬ್ಬ ಮೇಲೆ ಗುಂಪು ಗುಂಪಾಗಿ ಬಂದ ಕಾಶ್ಮೀರದ ಯುವಕರು ಹಲ್ಲೆ ನಡೆಸಿದ್ದರು. ಯೋಧನಿಗೆ ಕಾಲಿನಲ್ಲಿ ಒದೆಯಲಾಗಿತ್ತು. ತಲೆ ಮೇಲೆ ಹೊಡೆದಿದ್ದರು. ಯುವಕರು ಹಲ್ಲೆ ನಡೆಸುತ್ತಿದ್ದರೂ ಯೋಧ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನದಿಂದಲೇ ಸಾಗುತ್ತಿದ್ದರು. ಹಲ್ಲೆ ನಡೆಸುತ್ತಿದ್ದ ಯುವಕರು ಕೆಲ ಘೋಷಣೆಗಳನ್ನು ಕೂಗುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ, ಘಟನೆ ಸಂಬಂಧ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.
ಈ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾನೂನನ್ನು ಯಾರೇ ಕೈಗೆತ್ತಿಕೊಂಡರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಆರ್'ಪಿಎಫ್ ಡೈರೆಕ್ಟರ್ ಜನರಲ್ ಸುದೀಪ್ ಲಖ್ತಕಿಯಾ ಅವರು ಹೇಳಿದ್ದಾರೆ.
ಮೂಲಗಳು ತಿಳಿಸಿರುವ ಪ್ರಕಾರ, ಯೋಧನ ಮೇಲೆ ಹಲ್ಲೆ ನಡೆಸಿದ್ದ ಯುವಕರನ್ನೂ ಈಗಾಗಲೇ ಅಧಿಕಾರಿಗಳು ಗುರ್ತಿಸಿದ್ದು, ಶೀಘ್ರದಲ್ಲೇ ಯುವಕರ ಮೇಲೆ ಕ್ರಮಕೈಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.
ತನಿಖೆ ವೇಳೆ ವಿಡಿಯೋವನ್ನು ಪರಿಶೀಲಿಸಲಾಗಿದ್ದು, ಈ ವಿಡಿಯೋ ಅಧಿಕೃತವಾದದ್ದು ಎಂಬುದು ದೃಢವಾಗಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಗಳನ್ನು ಗುರ್ತಿಸಲಾಗಿದೆ. ಘಟನೆ ನಡೆದಾಗ ಮೀಸಲು ಪಡೆಯ ಯಾವ ತುಕಡಿ ಅಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನೂ ಗುರ್ತಿಸಲಾಗಿದೆ. ಬಡಗಾಮ್ ಜಿಲ್ಲೆಯ ಚಡೂರಾ ವಿಧಾನಸಭಾ ಕ್ಷೇತ್ರದ ಕ್ರಲ್ಪೊರಾದಲ್ಲಿ ಘಟನೆ ನಡೆದಿದೆ ಎಂದು ಲಖ್ತಕಿಯಾ ಅವರು ತಿಳಿಸಿದ್ದಾರೆ.