ದೇಶ

ಉತ್ತರಪ್ರದೇಶದಲ್ಲೀಗ ನಿಮ್ಮ ಅಪ್ಪನ ಸರ್ಕಾರವಿದೆ: ರಾಜಾ ಸಿಂಗ್

Manjula VN
ಭೂಪಾಲ್: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸುವವರ ರುಂಡಗಳನ್ನು ಚಂಡಾಡುತ್ತೇವೆಂದು ಹೇಳಿಕೆ ನೀಡಿದ್ದ ತೆಲಂಗಾಣ ರಾಜ್ಯದ ಹೈದರಾಬಾದ್ ಬಿಜೆಪಿ ಶಾಸಕ ರಾಜಾ ಸಿಂಗ್ ಇದೀಗ ಮತ್ತೊಂದು ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಗೆ ಬಂದಿದ್ದಾರೆ. 
ಭೂಪಾಲ್'ನ ಬೈರಗರ್ಹ್ ನಲ್ಲಿ ಆಯೋಜಿಸಿದ್ದ ಹನುಮಾನ್ ಜಯಂತಿ ಕಾರ್ಯದಲ್ಲಿ ರಾಜಾಸಿಂಗ್ ಅವರು ಮಾತನಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಹಿಂದುಗಳನ್ನು ಶತ್ರುಗಳಂತೆ ನೋಡುವ ಜನರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ರಾಜಾ ಸಿಂಗ್ ಅವರು ನಿಂದಿಸಿರುವ ವಿಡಿಯೋಗಳು ಇದೀಗ ವೈರಲ್ ಆಗಿದೆ. 
ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಹುಜುರ್ ರಾಮೇಶ್ವರ್ ಶರ್ಮಾ ಕೂಡ ಇರುವುದು ಕಂಡುಬಂದಿದೆ. ಕಾರ್ಯಕ್ರಮದಲ್ಲಿ ಹಾಡೊಂದನ್ನು ಹಾಡಿರುವ ರಾಜಾ ಸಿಂಗ್ ಅವರು, ವಂದೇ ಮಾತರಂ ಹಾಡಲು ನಿರಾಕರಿಸುವವರ ವಿರುದ್ಧ ಕಿಡಿಕಾರಿದ್ದಾರೆ. 
ವಂದೇ ಮಾತರಂ ಹಾಡಲು ನಿರಾಕರಿಸುವವರಿಗೆ ನಾನು ಡಿಸ್ಕೌಂಟ್ ನೀಡುತ್ತಿದ್ದೇನೆ ಹಾಗೂ 2 ದಿನಗಳ ಸಂಪೂರ್ಣ ಪ್ಯಾಕೇಜ್ ವೊಂದನ್ನು ನೀಡುತ್ತೇನೆ. ವಂದೇ ಮಾತರಂ ಹಾಡಲು ನಿರಾಕರಿಸುವವರನ್ನು ಪಾಕಿಸ್ತಾನ-ಪಂಜಾಬ್ ಗಡಿಗೆ ಕಳುಹಿಸುತ್ತೇವೆ. ಗಡಿಯಲ್ಲಿ ಎರಡು ದಿನಗಳ ಕಾಲ ಕಳೆದರೆ, ನಂತರ ಪಾಕಿಸ್ತಾನದಲ್ಲಿರುವ ಬದಲು ವಂದೇ ಮಾತರಂ ಹಾಡಿ ಭಾರತದಲ್ಲಿ ಉಳಿಯುವುದೇ ಉತ್ತಮವೆಂಬುದು ಅವರಿಗೇ ಮನವರಿಕೆಯಾಗುತ್ತದೆ ಎಂದು ರಾಜಾ ಸಿಂಗ್ ಅವರು ಹೇಳಿದ್ದಾರೆ. 
ವಂದೇ ಮಾತರಂ ಹಾಡಲು ನಿರಾಕರಿಸುತ್ತಿರುವವರಿಗೆ ಮುಂದಿನ ದಿನಗಳಲ್ಲಿ ರಕ್ಷಣೆ ಸಿಗುವುದಿಲ್ಲ. ತಲೆ ಬಾಗಿ ಅವರನ್ನು ಅವರೇ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. 2018ರೊಳಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ. ಉತ್ತರಪ್ರದೇಶಲ್ಲಿ ಇದೀಗ ನಿಮ್ಮ ಅಪ್ಪನ ಸರ್ಕಾರವಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ರಾಮ ಮಂದಿರ ಕುರಿತ ಸುಪ್ರೀಂಕೋರ್ಟ್ ಆದೇಶವನ್ನು ಕೊಂಡಾಡಿದ ರಾಜಾ ಸಿಂಗ್ ಅವರು, ಮುಸ್ಲಿಮರು ನಮಗೆ ಸಹಕಾರ ನೀಡಿದ್ದೇ ಆದರೆ, ಸರಾಯು ನದಿ ಬಳಿ ಮಸೀದಿ ಕಟ್ಟಲು ಸಹಾಯ ಮಾಡುತ್ತೇವೆ. ಇಲ್ಲದೇ ಹೋದಲ್ಲಿ ಕಾನೂನನ್ನು ರೂಪಿಸಿ 2018ರೊಳಗಾಗಿ ರಾಮ ಮಂದಿರವನ್ನು ಕಟ್ಟುವುದಂತೂ ಖಚಿತ ಎಂದಿದ್ದಾರೆ. 
SCROLL FOR NEXT