ವೆಲ್ಲೂರು: ಇನ್ನು ಮುಂದೆ ಕೇವಲ 50 ಸೆಕೆಂಡುಗಳಲ್ಲಿ ನೀವು ರೈಲಿನ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ನಿಮ್ಮ ಮೊಬೈಲ್ ನಲ್ಲಿ ಹೈ ಸ್ಪೀಡ್ ಇಂಟರ್ನೆಟ್, ಪೆಟಿಎಂ ಇ ವಾಲೆಟ್, ರೈಲು ಕನೆಕ್ಟ್ ಆಪ್ ಇದ್ದರೆ ಸಾಕು, ಯಾವಾಗ, ಎಲ್ಲಿಂದ ಬೇಕಾದರೂ ತತ್ಕಾಲ್ ನಲ್ಲಿ ತಕ್ಷಣಕ್ಕೆ ತತ್ಕಾಲ್ ಟಿಕೆಟ್ ಕಾಯ್ದಿರಿಸಬಹುದು.
ಈ ಸೌಲಭ್ಯ ಏಪ್ರಿಲ್ 9ರಿಂದ ಲಭ್ಯವಿದೆ. ರೈಲ್ ಕನೆಕ್ಟ್ ಆಪ್ ಜನವರಿ 7ರಂದು ಆರಂಭಗೊಂಡಿದ್ದರೂ ಸಹ 10 ದಿನಗಳ ನಂತರ ಮೊದಲ ಟಿಕೆಟ್ ಅದರಲ್ಲಿ ಕಾಯ್ದಿರಿಸಲಾಯಿತು. ಅದು ಕೂಡ ಎಸಿ ದರ್ಜೆಯಲ್ಲಿ. ರೈಲ್ವೆ ಇಲಾಖೆ ಸ್ಲೀಪರ್ ದರ್ಜೆಗೆ ಕೂಡ ಈ ಆಪ್ ನ್ನು ಬಳಸಲು ಅನುಕೂಲ ಮಾಡಿಕೊಟ್ಟಿದೆ. ಈ ಹಿಂದೆ ಆನ್ ಲೈನ್ ನಲ್ಲಿ ತತ್ಕಾಲ್ ಅಡಿ ಟಿಕೆಟ್ ಬುಕ್ ಮಾಡುವ ಸಮಯ ಬೆಳಗ್ಗೆ 10ರಿಂದ 10.30ರವರೆಗೆ ಎಸಿ ದರ್ಜೆಗೆ ಮತ್ತು 11ರಿಂದ 11.30ರವರೆಗೆ ಸ್ಲೀಪರ್ ದರ್ಜೆಗೆ ಆಗಿತ್ತು. ರೈಲು ನಿಲ್ದಾಣದಲ್ಲಿ ಸರದಿಯಲ್ಲಿ ನಿಂತು ತತ್ಕಾಲ್ ಬುಕ್ ಮಾಡುವ ಬದಲು ಪ್ರಯಾಣಿಕರಿಗೆ ಆನ್ ಲೈನ್ ನಲ್ಲಿ ಸೌಲಭ್ಯ ಕಲ್ಪಿಸಲಾಗಿತ್ತು. ಈಗ ಅದಕ್ಕಿಂತಲೂ ಹೆಚ್ಚಿನ ಸೌಲಭ್ಯ ನೀಡಲಾಗಿದ್ದು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ತತ್ಕಾಲ್ ಟಿಕೆಟನ್ನು ರೈಲ್ ಕನೆಕ್ಟ್ ಆಪ್ ನಲ್ಲಿ ಕಾಯ್ದಿರಿಸಬಹುದು.
ಕೇವಲ 50 ಸೆಕೆಂಡುಗಳಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ನಿಮ್ಮ ಮೊಬೈಲ್ ನ ಆಪ್ ನಲ್ಲಿ ಹಣ ಮೊದಲೇ ಭರ್ತಿಯಾಗಿದ್ದರೆ ಯಾವುದೇ ಹಣ ಪಾವತಿಯ ವಿವರಗಳನ್ನು ಕೂಡ ನೀಡಬೇಕಾಗಿಲ್ಲ ಎಂದು ಐಆರ್ ಸಿಟಿಸಿ ಮತ್ತು ದಕ್ಷಿಣ ರೈಲ್ವೆ ಮೂಲಗಳು ತಿಳಿಸಿವೆ.
ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ರೈಲ್ ಕನೆಕ್ಟ್ ಆಪ್ ಇದ್ದು ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುವುದಿದ್ದರೂ ಕೂಡ ಇದರ ಬಗ್ಗೆ ಕೆಲವು ಟೀಕೆಗಳು ಕೇಳಿಬರುತ್ತಿವೆ. ಇಳಿವಯಸ್ಸಿನವರಿಗೆ, ರೋಗಿಗಳಿಗೆ ಇದರಿಂದ ತೊಂದರೆಯಾಗಲಿದೆ ಎನ್ನುತ್ತಾರೆ ರೈಲ್ವೆ ಪ್ರಯಾಣಿಕರ ಒಕ್ಕೂಟದ ಸದಸ್ಯರು.
ಕೇವಲ ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್ ಕಂಪನಿಗಳು ಲಾಭವಾಗಲಿದೆ ಎನ್ನುತ್ತಾರೆ ಕನ್ಯಾಕುಮಾರಿ ಜಿಲ್ಲೆ ರೈಲ್ವೆ ಬಳಕೆದಾರರ ಒಕ್ಕೂಟದ ಕಾರ್ಯದರ್ಶಿ ಪಿ. ಎಡ್ವರ್ಡ್ ಜೆನಿ.
ಆದರೆ ಇದರಿಂದ ರೈಲು ಇಲಾಖೆಗೆ ವೆಚ್ಚ ಕಡಿತವಾಗಲಿದೆ. ಮುಂದಿನ 5 ವರ್ಷಗಳಲ್ಲಿ ಟಿಕೆಟ್ ಬುಕ್ಕಿಂಗ್ ಕೌಂಟರ್ ಗಳಲ್ಲಿ ಸಿಬ್ಬಂದಿಯನ್ನು ಕಡಿತಗೊಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.