ದೇಶ

ಪಕ್ಷಕ್ಕೆ ಸಡ್ಡು ಹೊಡೆದ ದಿನಕರನ್; ಶಶಿಕಲಾ ಭೇಟಿ ಸಾಧ್ಯತೆ, ಅಗತ್ಯ ಬಿದ್ದರೆ ಡಿಎಂಕೆಯೊಂದಿಗೆ ಮೈತ್ರಿ?

Srinivasamurthy VN

ಚೆನ್ನೈ: ಅತ್ತ ತಾವೇ ಅಧಿಕಾರಕ್ಕೇರಿಸಿದ ಪಳನಿ ಸ್ವಾಮಿ ತಿರುಗಿ ಬಿದ್ದು ತಮ್ಮನ್ನೇ ಪಕ್ಷದಿಂದ ಉಚ್ಠಾಟನೆ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿರುವಂತೆಯೇ ಇತ್ತ ಪಕ್ಷಕ್ಕೆ ಸಡ್ಡು ಹೊಡೆದಿರುವ ಟಿಟಿವಿ ದಿನಕರನ್ ಬೆಂಗಳೂರಿನ  ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ವ್ರಕಾರ ತಮಿಳುನಾಡಿನಲ್ಲಿ ನಿನ್ನೆ ರಾತ್ರಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆ ಬಳಿಕ ದಿನಕರನ್ ಅವರು ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ  ಪಕ್ಷದ ವರ್ಚಸ್ಸು ಹಾಗೂ ಪಕ್ಷದ ಚಿನ್ಹೆ ಉಳಿಸಿಕೊಳ್ಳುವ ಸಲುವಾಗಿ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಒಂದಾಗಿ ಅಗತ್ಯ ಬಿದ್ದರೆ ಶಶಿಕಲಾ ಬಣವನ್ನು ಉಚ್ಛಾಟಿಸಲು ನಿರ್ಧರಿಸಿರುವಂತೆಯೇ ಇತ್ತ ಇದಕ್ಕೆ ಪ್ರತಿ ದಾಳ ಉರುಳಿಸಲು  ಸಿದ್ಧವಾಗಿರುವ ಟಿಟಿವಿ ದಿನಕರನ್ ನಿನ್ನೆ ರಾತ್ರಿ ತಮ್ಮ ಬೆಂಬಲದ ಮೂವರು ಸಚಿವರೊಂದಿಗೆ ತುರ್ತು ಸಭೆ ನಡೆಸಿದ್ದಾರೆ.

ಶಶಿಕಲಾ ಅವರಿಗೆ ನಿಷ್ಠರಾಗಿರುವ ಯುಕೆ ರಾಧಾಕೃಷ್ಣನ್ ಅವರ ನಿವಾಸದಲ್ಲಿ ಸಭೆ ನಡೆಸಲಾಗಿದ್ದು, ಈ ವೇಳೆ ಹಲವು ಅಂಶಗಳ ಕುರಿತು ಚರ್ಚೆ ನಡೆಸಲಾಗಿದೆ. ಈ ಪೈಕಿ ಶಶಿಕಲಾ ಮತ್ತು ದಿನಕರನ್ ವಿರುದ್ಧ ಶಾಸಕರು  ಬಂಡಾಯವೆದ್ದರೆ ಸರ್ಕಾರವೇ ಉರುಳಿ ಹೋಗುತ್ತದೆ. ದಿನಕರನ್ ಅವರಿಗೆ 38 ಶಾಸಕರ ಬೆಂಬಲವಿದೆ ಎಂದು ಕೆಲ ಶಾಸಕರು ಎಚ್ಚರಿಕೆ ನೀಡಿದ್ದಾರೆ. ಅಂತೆಯೇ ಅಗತ್ಯ ಬಿದ್ದರೆ ತಮ್ಮ ಬೆಂಬಲದ ಶಾಸಕರೊಂದಿಗೆ ಡಿಎಂಕೆ  ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಕುರಿತೂ ದಿನಕರನ್ ಚಿಂತನೆ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದೇ ಕಾರಣಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿ ಮಾಡಲು ದಿನಕರನ್ ನಿರ್ಧರಿಸಿದ್ದು, ಇಂದು ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

SCROLL FOR NEXT