ನವದೆಹಲಿ: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರ ರಕ್ಷಣೆ ಕುರಿತಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್'ನಲ್ಲಿ ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ.
ಜಾಧವ್ ರಕ್ಷಣೆ ಕುರಿತಂತೆ ನ್ಯಾಯಕ್ಕಾಗಿ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರೊಬ್ಬರು ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ರಾಹುಲ್ ಶರ್ಮಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದಾರೆ. ಪಾಕಿಸ್ತಾನದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜಾಧವ್ ಅವರನ್ನು ರಕ್ಷಣೆ ಮಾಡುವಲ್ಲಿ ಹಾಗೂ ನ್ಯಾಯಕ್ಕಾಗಿ ವಿದೇಶಾಂಗ ಸಚಿವಾಲಯ ಹಾಗೂ ಗೃಹ ಸಚಿವಾಲಯಕ್ಕೆ ನ್ಯಾಯಾಲಯ ಸೂಕ್ತ ರೀತಿಯ ನಿರ್ದೇಶನವನ್ನು ನೀಡಬೇಕಿದೆ.
ನೌಕಾಪಡೆಯ ಮಾಜಿ ಅಧಿಕಾರಿಯನ್ನು ಪಾಕಿಸ್ತಾನ ಅಕ್ರಮವಾಗಿ ಬಂಧಿಸಿದ್ದೂ ಅಲ್ಲದೆ, ಗಲ್ಲುಶಿಕ್ಷೆಯನ್ನು ವಿಧಿಸಿದೆ. ಹೀಗಾಗಿ ಜಾಧವ್ ಅವರಿಗೆ ರಾಯಭಾರಿ ನೆರವು ನೀಡುವ ಸಂಬಂಧ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವಂತೆ ಸೂಚನೆ ನೀಡಬೇಕೆಂದು ಪಿಐಎಲ್ ನಲ್ಲಿ ರಾಹುಲ್ ಹೇಳಿಕೊಂಡಿದ್ದಾರೆ. ಅರ್ಜಿ ವಿಚಾರಣೆ ನಾಳೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.