ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ
ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ವಿಚಾರಣೆ ಎದುರಿಸಲು ಸಿದ್ಧಳಿದ್ದೇನೆಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿಯವರು ಬುಧವಾರ ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ವಿಚಾರಣೆಗೆ ಒಪ್ಪಿಗೆ ನೀಡಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಉಮಾ ಭಾರತಿಯವರು, ಅಯೋಧ್ಯೆ, ಗಂಗಾ ಹಾಗೂ ತ್ರಿವರ್ಣ ಧ್ವಜಕ್ಕಾಗಿ ಯಾವುದೇ ರೀತಿಯ ಶಿಕ್ಷೆ ಅನುಭವಿಸಲು ನಾನು ಸಿದ್ಧಳಿದ್ದೇನೆ. ಇದರಲ್ಲಿ ನಾನೇಕೆ ವಿಶಾದ ವ್ಯಕ್ತಪಡಿಸಬೇಕು? ಪ್ರಕರಣ ಹಿಂದೆ ಯಾವುದೇ ಪಿತೂರಿಗಳಿಲ್ಲ. ಎಲ್ಲವೂ ಬಹಿರಂಗ ಸತ್ಯವಾಗಿದೆ. ಇದರಲ್ಲಿ ಚಿಂತನೆ ನಡೆಸುವಂತಹದ್ದಾವುದೂ ಇಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ವಿರೋಧ ಪಕ್ಷಗಳು ರಾಜೀನಾಮೆಗೆ ಆಗ್ರಹಿಸುತ್ತಿರುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಆರೋಪಗಳು ಹಾಗೂ ರಾಜೀನಾಮೆ ಆಗ್ರಹಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಮಾತನಾಡುವುದಕ್ಕೆ ಅವರು ಯಾರು? ತುರ್ತುಪರಿಸ್ಥಿತಿಯನ್ನು ಹೇರಿ, ಮುಸ್ಲಿಂ ಕ್ರಿಮಿನಾಶಕಗಳನ್ನು ಬಲವಂತದಿಂದ ಹೇರಿದರು ಎಂದು ವಾಗ್ದಾಳಿ ನಡೆಸಿದ್ದಾರೆ.
ನಂತರ ರಾಮ ಮಂದಿರ ವಿಚಾರ ಸಂಬಂಧ ಮಾತನಾಡಿದ ಅವರು, ರಾಮ ಮಂದಿನ ನಿರ್ಮಾಣ ಮಾಡುವ ಅಗತ್ಯವಿದೆ. ಬಾಬ್ರಿ ಮಸೀದಿ ಪ್ರಕರಣ ಪ್ರಸ್ತುತ ಮುಕ್ತಾಯದ ಹಂತದಲ್ಲಿದೆ. ತಪ್ಪಿತಸ್ಥಳೆಂದು ನ್ಯಾಯಾಲಯ ಆದೇಶ ಹೊರಡಿಸಿಲ್ಲ. ಈ ದೇಶ ಗೋವು, ರಾಮ ಮತ್ತು ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ್ದಾಗಿದೆ. ಯಾವುದೇ ಪರಿಸ್ಥಿತಿ ಹಾಗೂ ಸಂದರ್ಭ ಬಂದರೂ ಅದನ್ನು ಸಮರ್ಥಿಸಿಕೊಳ್ಳಲು ನಾನು ಸಿದ್ಧಳಿದ್ದೇನೆಂದು ಹೇಳಿದ್ದಾರೆ.