ನವದೆಹಲಿ: ರೈಲುಗಳು ತಡವಾಗಿ ಸಂಚರಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ರೈಲುಗಳ ವಿಳಂಬ ತಪ್ಪಿಸಿ ಇಲ್ಲಾ ಕ್ರಮ ಎದುರಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರೈಲುಗಳ ಸಂಚಾರದಲ್ಲಿ ಸಮಯ ಪಾಲನೆಯಾಗದಿದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಪ್ರಭು ಅವರು ಹೇಳಿದ್ದಾರೆ.
ಸಮಯ ಪಾಲನೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ರಾತ್ರಿ 10 ಗಂಟೆಯಿಂದ ಬೆಳಗ್ಗೆ ಗಂಟೆಯವರೆಗೆ ರಾತ್ರಿ ಪಾಳಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ನಿಯೋಜಿಸುವಂತೆ ವಲಯಗಳ ಮುಖ್ಯಸ್ಥರಿಗೆ ಸಚಿವರು ಸೂಚನೆ ನೀಡಿದ್ದಾರೆ. ಅಲ್ಲದೆ ಭಾರತೀಯ ರೈಲ್ವೆ ವೆಬ್ ಸೈಟ್ ರಾಷ್ಟ್ರೀಯ ರೈಲ್ವೆ ವಿಚಾರಣೆ ವ್ಯವಸ್ಥೆ(ಎನ್ ಟಿಇಎಸ್ )ಯಲ್ಲಿ ಲಭ್ಯವಿರುವ ರೈಲುಗಳ ವೇಳಾಪಟ್ಟಿಯ ಮಾಹಿತಿ ದೋಷಗಳನ್ನು ಸರಿಪಡಿಸುವಂತೆ ಸೂಚಿಸಿದ್ದಾರೆ.
ಕಳೆದ ಏಪ್ರಿಲ್ 1ರಿಂದ 16ರವರೆಗಿನ ಅವಧಿಯಲ್ಲಿ ರೈಲ್ವೆ ಸಮಯಪಾಲನೆ ಮಟ್ಟ ಶೇ.79ಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಮಟ್ಟ ಶೇ.84ರಷ್ಟಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್ ಪ್ರಭು ಅವರು ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.