ದೇಶ

ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ವಿಐಪಿ ಕಾರುಗಳ ಮೇಲೆ ಕೆಂಪು ದೀಪ ಬಳಕೆಗೆ ನಿಷೇಧ

Vishwanath S
ನವದೆಹಲಿ: ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ವಿಐಪಿ ಕಾರುಗಳ ಮೇಲಿನ ಕೆಂಪು ಮತ್ತು ನೀಲಿ ಬಣ್ಣದ ದೀಪವನ್ನು ಮೇ 1ರಿಂದ ಅಳವಡಿಸಿಕೊಳ್ಳದಂತೆ ಆದೇಶ ಹೊರಡಿಸಿದೆ. 
ತುರ್ತು ಸೇವೆಗಳು ಮತ್ತು ಆ್ಯಂಬುಲೆನ್ಸ್ ಹೊರತು ಪಡಿಸಿ ಇನ್ನು ಯಾರೂ ಸಹ ಕೆಂಪು ಮತ್ತು ನೀಲಿ ಬಣ್ಣವನ್ನು ದೀಪವನ್ನು ಬಳಸದಂತೆ ಆದೇಶ ಹೊರಡಿಸಿದ್ದು ಸದ್ಯ ಅಳವಡಿಸಿರುವ ಕಾರುಗಳ ಮೇಲಿನ ಕೆಂಪು ದೀಪವನ್ನು ತೆಗೆಯಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 
ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆ ಸ್ಪೀಕರ್ ಮಾತ್ರ ಕೆಂಪು ದೀಪ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂಬ ಸುದ್ದಿಗಳು ಪ್ರಸಾರವಾಗುತ್ತಿದ್ದವು. ಆದರೆ ಈ ಸಂಬಂಧ ಸ್ಪಷ್ಟನೆ ನೀಡಿರುವ ಗಡ್ಕರಿ ಅವರು ತುರ್ತು ಸೇವೆ ಮತ್ತು ಆ್ಯಂಬುಲೆನ್ಸ್ ಹೊರತುಪಡಿಸಿ ಇನ್ನೂ ಯಾರೂ ಸಹ ಕೆಂಪು ದೀಪ ಬಳಸುವಂತಿಲ್ಲ ಎಂದು ಹೇಳಿದ್ದಾರೆ. 
ನಿಯಮದ ಪ್ರಕಾರ ಕ್ಯಾಬಿನೆಟ್ ದರ್ಜೆಯ 32 ಸಚಿವರಿಗೆ ಮತ್ತಿತರಿಗೆ ತಮ್ಮ ಕಾರುಗಳಲ್ಲಿ ಕೆಂಪು ದೀಪ ಹಾಕಿಕೊಳ್ಳಬಹುದಾಗಿತ್ತು, ಆದರೆ ಕೆಂಪು ದೀಪ ಹಾಕಿಸಿಕೊಳ್ಳುವ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು.
ಕಳೆದ ವಾರ ಪ್ರಧಾನ ಮಂತ್ರಿಗಳ ಕಾರ್ಯಾಲಯ ಸಭೆ ಕರೆದು ಈ ವಿಷಯವಾಗಿ ಸಭೆ ನಡೆಸಿತು. ರಸ್ತೆ ಸಾರಿಗೆ ಸಂಸ್ಥೆ ಮೂರು ಆಯ್ಕೆಗಳನ್ನಿಟ್ಟಿತ್ತು, ಇದಕ್ಕಾಗಿ ಪ್ರಧಾನ ಮಂತ್ರಿಗಳು ಹಿರಿಯ ನಾಯಕರು ಮತ್ತು ಸಂಪುಟ ಸಚಿವರೊಂದಿಗೆ ಸಭೆ ನಡೆಸಿ ಕೆಂಪು ದೀಪ ಬಳಸುವ ಸಂಸ್ಕತಿಗೆ ಅಂತ್ಯ ಹಾಡಿದೆ. ಈ ಪ್ರಸ್ತಾವನೆಯನ್ನು ಒಂದೂವರೆ ವರ್ಷದ ಹಿಂದೆಯೇ ಕಳುಹಿಸಲಾಗಿತ್ತಂತೆ. 
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಎಲ್ಲಾ ಸಚಿವರು ಕೆಂಪು ದೀಪದ ಕಾರು ಬಳಕೆಯನ್ನು ನಿಲ್ಲಿಸಿದ್ದರು. ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿಐಪಿ ಸಂಸ್ಕೃತಿಯಿಂದ ದೂರ ಉಳಿಯುವಂತೆ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ.
SCROLL FOR NEXT