ತ್ರಿವಳಿ ತಲಾಖ್ ಸಂತ್ರಸ್ಥೆ ಸಹೋದರಿ
ಉಧಮ್'ಸಿಂಗ್ ನಗರ: ತ್ರಿವಳಿ ತಲಾಖ್ ನಿಂದ ಅನ್ಯಾಯಕ್ಕೆ ಒಳಗಾಗುವುದಕ್ಕಿಂತ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದೇ ಒಳ್ಳೆಯದು ಎಂದು ತ್ರಿವಳಿ ತಲಾಖ್ ಸಂತ್ರಸ್ಥೆ ಸಹೋದರಿಯೊಬ್ಬರು ಬುಧವಾರ ಹೇಳಿದ್ದಾರೆ.
ತನ್ನ ಸಹೋದರಿಗೆ ಆಕೆಯ ಪತಿ ತ್ರಿವಳಿ ತಲಾಖ್ ನೀಡಿರುವ ಹಿನ್ನಲೆಯಲ್ಲಿ ತ್ರಿವಳಿ ತಲಾಖ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆ, ತ್ರಿವಳಿ ತಲಾಖ್ ಮೇಲೆ ನಿಷೇಧ ಹೇರದಿದ್ದರೆ, ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆಂದು ಮುಸ್ಲಿಂ ಮೌಲ್ವಿಗಳಿಗೆ ಬೆದರಿಕೆ ಹಾಕಿದ್ದಾರೆ.
ಒಬ್ಬ ವ್ಯಕ್ತಿ ಯಾವ ಸಮಯದಲ್ಲಿ, ಯಾವಾಗ ಬೇಕಾದರೂ ತನ್ನ ಪತ್ನಿಗೆ ತಲಾಖ್...ತಲಾಖ್...ತಲಾಖ್ ಎಂದು ಮೂರು ಬಾರಿ ಹೇಳಿ ವಿಚ್ಛೇದನ ಪಡೆದುಕೊಳ್ಳಬಹುದು ಎಂದಾದರೆ, ಆತನೊಂದಿಗೆ ಮಹಿಳೆಯೊಬ್ಬಳು ತನ್ನ ಇಡೀ ಜೀವನವನ್ನು ಕಳೆಯುವುದರಲ್ಲಿ ಅರ್ಥವೇನಿದೆ?...ವಯಸ್ಸಾದ ನಂತರ ಅನ್ಯಾಯವಾದರೆ ಸಂತ್ರಸ್ಥೆ ಎಲ್ಲಿಗೆ ಹೋಗಬೇಕು?...
ನಾನು ಯುವತಿಯಾಗಿದ್ದೇನೆ...ತ್ರಿವಳಿ ತಲಾಖ್ ನಿಂದಾಗಿ ನನ್ನ ಇಡೀ ಜೀವನವನ್ನು ಭಯದಿಂದ ಏಕೆ ಕಳೆಯಬೇಕು?...ಭಯದಿಂದ ಅನ್ಯಾಯದಿಂದ ಜೀವನ ನಡೆಸುವುದಕ್ಕಿಂತ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಮೂರು ಬಾರಿ ಪದ ಹೇಳದ ನನ್ನ ಜೀವನವನ್ನು ನಾಶ ಮಾಡದೆ ಇರುವ ಹಿಂದೂ ವ್ಯಕ್ತಿಯೊಬ್ಬನನ್ನು ವಿವಾಹವಾಗುವುದೇ ಉತ್ತಮ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿರುವ ಮಹಿಳೆ, ದೇಶಕ್ಕಾಗಿ ಮೋದಿಯವರು ಮಾಡುತ್ತಿರುವ ಕೆಲಸ ಉತ್ತಮವಾಗಿದೆ. ಮಹಿಳೆಯರಿಗ ಪ್ರಮುಖವಾಗಿ ಮುಸ್ಲಿಂ ಮಹಿಳೆಯರಿಗೆ ಮಾಡುತ್ತಿರುವ ಅವರ ಕೆಲಸ ಅತ್ಯುತ್ತಮವಾಗಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ತ್ರಿವಳಿ ತಲಾಖ್ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ತ್ರಿವಳಿ ತಲಾಖ್ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ಶೋಷಣೆ ನಿಲ್ಲಬೇಕು. ಅವರಿಗೆ ನ್ಯಾಯ ದೊರಕಬೇಕೆಂದು ಹೇಳಿದ್ದರು.
ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ತ್ರಿವಳಿ ತಲಾಖ್ ಅನ್ನು ಹಿಂದೂಗಳ ಪುರಾಣ ಗ್ರಂಥ ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಹೋಲಿಕೆ ಮಾಡಿದ್ದರು. ಜ್ವಲಂತ ಸಮಸ್ಯೆಯಾಗಿರುವ ತ್ರಿವಳಿ ತಲಾಖ್ ಬಗ್ಗೆ ಮೌನ ವಹಿಸುವುದು ದ್ರೌಪದಿಯ ವಸ್ತ್ರಾಪಹರಣದಷ್ಟೇ ಸಮಾನ ತಪ್ಪು. ಚಂದ್ರಶೇಖರ್ ಕೂಡ ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದರು. ಎಲ್ಲಾ ಮುಸ್ಲಿಂ ಸಹೋದರಿಯರಿಗೆ ನ್ಯಾಯ ಸಿಗಬೇಕು ಎಂದು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos