ಬಿಜೆಪಿ ಸೇರಿದ ಬರ್ಖಾ ಸಿಂಗ್ ಶುಕ್ಲಾ
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷವನ್ನು ಮುನ್ನಡೆಸಲು ಮಾನಸಿಕವಾಗಿ ಅಸಮರ್ಥ ಎಂದು ಹೇಳಿ ಕಾಂಗ್ರೆಸ್ ನಿಂದ ಉಚ್ಚಾಟನೆಗೊಂಡಿದ್ದ ಬರ್ಖಾ ಸಿಂಗ್ ಶುಕ್ಲ ಅವರು ಶನಿವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದೆಹಲಿ ಬಿಜೆಪಿ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶ್ಯಾಮ್ ಜಜು ಅವರನ್ನು ಭೇಟಿ ಮಾಡಿದ ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಬರ್ಖಾ ಸಿಂಗ್ ಅವರು, ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು.
ಬಿಜೆಪಿ ಸೇರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬರ್ಖಾ, ನಾನು ಚುನಾವಣೆಗೆ ಸ್ಪರ್ಧಿಸುವ ಅಥವಾ ಯಾವುದೇ ಹುದ್ದೆಯ ಆಕಾಂಕ್ಷಿಯಾಗಿ ಬಿಜೆಪಿ ಸೇರಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತ ಹಾಗೂ ಯೋಜನೆಗಳನ್ನು ಮೆಚ್ಚಿ ಬಂದಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿ ಅನರ್ಹ ಎಂದಿದ್ದರು. ಇದಾದ ಒಂದೇ ದಿನದಲ್ಲಿ ಶುಕ್ಲ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸಿ ಉಚ್ಚಾಟನೆ ಮಾಡಲಾಗಿತ್ತು.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕಾಂಗ್ರೆಸ್ನಿಂದ ಶುಕ್ಲ ಅವರನ್ನು 6 ವರ್ಷಗಳ ಕಾಲ ಹೊರ ಹಾಕಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಕಾಂಗ್ರೆಸ್ನ ಮುಖ್ಯಸ್ಥ ಅಜಯ್ ಮಕಾನ್ ಅವರ ನಾಯಕತ್ವದಿಂದ ಬೇಸತ್ತು ಗುರುವಾರ ತನ್ನ ಎಲ್ಲ ಹುದ್ದೆಗಳಿಗೂ ಶುಕ್ಲ ರಾಜೀನಾಮೆ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics