ಲಖನೌ: ಹೆಣ್ಣು ಮಗುವಿಗೆ ಜನ್ಮ ನೀಡಿದರು ಎಂಬ ಒಂದೇ ಕಾರಣಕ್ಕೆ ರಾಷ್ಟ್ರೀಯ ನೆಟ್ ಬಾಲ್ ಆಟಗಾರ್ತಿಗೆ ಪತಿ ತ್ವಿವಳಿ ತಲ್ಲಾಖ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ದೇಶಾದ್ಯಂತ ತ್ರಿವಳಿ ತಲಾಖ್ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಷ್ಟ್ರೀಯ ನೆಟ್ ಬಾಲ್ ಆಟಗಾರ್ತಿ ಶುಮಾಯಲ ಜಾವೆದ್ ಅವರಿಗೆ ಅವರ ಪತಿ ಅಜಂ ಅಬ್ಬಾಸಿ ಕ್ಷುಲ್ಲಕ ಕಾರಣಕ್ಕೆ ತ್ರಿವಳಿ ತಲಾಖ್ ನೀಡಿದ್ದಾರೆ. ಶುಮಾಯಲ ಜಾವೆದ್ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಅವರಿಗೆ ತಲಾಖ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ. 2014 ಫೆಬ್ರವರಿ 9ರಂದು ಲಖನೌ ಸಮೀಪದ ಗೋಸಿಯಾಘಂಜ್ ನಲ್ಲಿ ಶುಮಾಯಲ ಜಾವೆದ್ ಮತ್ತು ಅಜಂ ಅಬ್ಬಾಸಿ ಅವರ ವಿವಾಹವಾಗಿತ್ತು ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಸ್ವತಃ ರಾಷ್ಟ್ರೀಯ ನೆಟ್ ಬಾಲ್ ಆಟಗಾರ್ತಿ ಶುಮಾಯಲ ಜಾವೆದ್ ಅವರು ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದು, ಮದುವೆಯಾದ ಆರಂಭದಿಂದಲೂ ನನ್ನ ಮೈದುನರು ಅಂದರೆ ನನ್ನ ಪತಿಯ ಸಹೋದರರು ವರದಕ್ಷಿಣೆಗಾಗಿ ನನ್ನನ್ನು ಪೀಡಿಸುತ್ತಿದ್ದರು. ಅಲ್ಲದೆ ನನ್ನ ಮೇಲೆ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ನಡೆಸುತ್ತಿದ್ದರು. ಇವರ ದೌರ್ಜನ್ಯ ನೋಡಲಾಗದೇ ನನ್ನ ತಂದೆ 2014ರ ಜೂನ್ ತಿಂಗಳಲ್ಲಿ 2 ಲಕ್ಷ ರುಗಳನ್ನು ನೀಡಿದ್ದರು. ಬಳಿಕ ಒಂದಷ್ಟು ದಿನ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ಆದರೆ ಬಳಿಕ ನನ್ನ ಪತಿಯ ಸಹೋದರಿಯರು ಮತ್ತೆ ನನಗೆ ಹಿಂಸೆ ನೀಡಲಾರಂಭಿಸಿದರು. ಹೀಗಾಗಿ ನನ್ನ ತಂದೆ ಮತ್ತೆ ನನ್ನ ಬ್ಯಾಂಕ್ ಖಾತೆಗೆ ಒಂದು ಲಕ್ಷ ರು.ಗಳನ್ನು ಠೇವಣಿ ಮಾಡಿದರು.
ಅಷ್ಟು ಹೊತ್ತಿಗಾಗಲೇ ನಾನು ಗರ್ಭಿಣಿಯಾಗಿದ್ದೆ. ಆಗ ನನ್ನ ಪತಿ ಮತ್ತು ಆತನ ಮನೆಯವರು ನಮಗೆ ಗಂಡು ಬೇಕು ಎಂದು ಹೇಳಿದ್ದರು, ಅಲ್ಲದೆ ಹೆಣ್ಣು ಮಗು ಜನಿಸಿದರೆ ತಲಾಖ್ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದರು. ನಾನು 8 ತಿಂಗಳ ಗರ್ಭಣಿಯಾಗಿದ್ದಾಗ ನನ್ನನ್ನು ಸ್ಕ್ಯಾನಿಂಗ್ ಗೆ ಒಳಪಡಿಸಲಾಯಿತು. ಆಗ ವರದಿಯಲ್ಲಿ ಅದು ಹೆಣ್ಣು ಮಗು ಎಂದು ತಿಳಿದು ನನ್ನನ್ನು ಮನೆಯಿಂದ ಹೊರ ಹಾಕಿದರು. ನನಗೆ ಮಗಳು ಜನಿಸಿದಾಗ ನನ್ನನ್ನು ನನ್ನ ತಂದೆ ಮನೆಗೆ ಬಿಟ್ಟು ಹೊರಟು ಹೋದರು. ಅದರ ಬಳಿಕವೂ ನನ್ನ ಮೈದುನರು ನನಗೆ ಹಿಂಸೆ ನೀಡುತ್ತಿದ್ದರು. ಕಳೆದ ಏಪ್ರಿಲ್ ನಲ್ಲಿ ನನ್ನ ಗಂಡ ತ್ರಿವಳಿ ತಲಾಖ್ ನೀಡಿದರು. ತಮಗೆ ಪೊಲೀಸ್ ಇಲಾಖೆಯಾಗಲಿ ಅಥವಾ ರಾಜಕಾರಣಿಗಳಾಗಲೀ ಯಾರೂ ನೆರವಿಗೆ ಬರಲಿಲ್ಲ ಎಂದು ಶುಮಯಲ ತಮ್ಮ ಕಥೆ ಹೇಳಿಕೊಂಡಿದ್ದಾರೆ.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೆರವು ಯಾಚಿಸಿರುವ ಶುಮಯಲ ಈ ಬಗ್ಗೆ ಪ್ರಧಾನಿ ಕಚೇರಿಗೆ ಪತ್ರವೊಂದನ್ನು ಬರೆಯಲು ಮುಂದಾಗಿದ್ದಾರೆ. ಪ್ರಸ್ತುತ ಶುಮಯಲ ಆಲ್ ಇಂಡಿಯಾ ನೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡು ಒಟ್ಟು ನಾಲ್ಕು ಬಾರಿ ಚಾಂಪಿಯನ್ ಶಿಪ್ ಕೂಡ ಗೆದ್ದಿದ್ದಾರೆ.