ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ವಡೋದರಾ: ಭಾರತೀಯ ಪ್ರಜೆ ಕುಲ್'ಭೂಷಣ್ ಜಾಧವ್'ಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸಿದ್ದೇ ಆದರೆ, ಬಲೂಚಿಸ್ತಾನವನ್ನು ಭಾರತ ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸಬೇಕೆಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಹೇಳಿದ್ದಾರೆ.
ಈ ಕುರಿತಂತೆ ಅಕೋತಾದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಕುಲ್'ಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸಿದ್ದೇ ಆದರೆ, ಭಾರತ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸಬೇಕು. ಗಡಿ ನಿಯಂತ್ರಣ ರೇಖೆಗಳನ್ನು ದಾಟುವ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದಿಂದ ಬಲೂಚಿಸ್ತಾನ, ಪಖ್ತುನಿಸ್ತಾನ್ ಮತ್ತು ಸಿಂಧ್ ಪ್ರಾಂತ್ಯಗಳನ್ನು ಬೇರ್ಪಡಿಸಿ ಪಾಠ ಭಾರತ ಪಾಠವನ್ನು ಕಲಿಸಬೇಕೆಂದು ಹೇಳಿದ್ದಾರೆ.
ಶೀಘ್ರದಲ್ಲಿಯೇ ಪಾಕಿಸ್ತಾನವನ್ನು ಭಯೋತ್ಪಾದನ್ ಪ್ರಾಯೋಜಿತ ರಾಷ್ಟ್ರವೆಂದು ಘೋಷಿಸಲಾಗುತ್ತದೆ. ಇದರಿಂದ ಪಾಕಿಸ್ತಾನ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನದಿಂದ ಬಲೂಚಿಸ್ತಾನ ಹಾಗೂ ಇನ್ನಿತರೆ ಪ್ರಾಂತ್ಯಗಳನ್ನು ಬೇರ್ಪಡಿಸುವ ಮೂಲಕವಷ್ಟೇ ಗಡಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಸಾಧ್ಯ. ಮೋಸ್ಟ್ ವಾಂಟೆಡ್ ಉಗ್ರರಾಗಿರುವ ಹಫೀಜ್ ಸಯೀದ್ ಮತ್ತು ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ನೆಲೆಯೂರಲು ಜಾಗಕೊಟ್ಟಿದ್ದು, ಇವರ ನೇತೃತ್ವದಲ್ಲಿಯೇ ದಾಳಿಗಳು ನಡೆಸುತ್ತಿವೆ.
ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕದ ಸಹಾಯ ಪಡೆಯಬೇಕಿದೆ. ಪಾಕಿಸ್ತಾನದ ಬೆದರಿಕೆಗಳಿಗೆ ಭಾರತ ತಲೆಕೆಡಿಸಿಕೊಳ್ಳಬಾರದು. ಚೀನಾದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಲು ಪ್ರಧಾನಿ ಮೋದಿಯವರು ಪ್ರಯತ್ನ ಮಾಡುತ್ತಿದ್ದಾರೆ. ಚೀನಾ ಪ್ರದೇಶದ ಮೂಲಕ ಕಾಶ್ಮೀರ ಪ್ರವೇಶಿಸಿ ಭಯೋತ್ಪಾದನೆ ವಿರುದ್ಧ ಹೋರಾಡಲು ಪ್ರಧಾನಿ ಮೋದಿಯವರು ಚೀನಾದ ಬಳಿ ಮನವಿ ಮಾಡಿದ್ದಾರೆಂದು ತಿಳಿಸಿದ್ದಾರೆ.
ಪಂಜಾಬ್ ರಾಜ್ಯದಲ್ಲಿ ನಡೆಯುತ್ತಿದ್ದ ಭಯೋತ್ಪಾದನೆ ಕುರಿತಂತೆ ಇದೇ ವೇಳೆ ಮಾತನಾಡಿರುವ ಅವರು, ಖಾಲಿಸ್ತಾನಿಗಳನ್ನು ಭಾರತ ಈ ಹಿಂದೆ ಹಿಮ್ಮೆಟ್ಟಿಸಿತ್ತು. ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನೂ ಶೀಘ್ರದಲ್ಲಿಯೇ ಹಿಮ್ಮೆಟ್ಟಿಸಲಿದೆ. ಭಾರತ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡ ಬಳಿಕ ಕಾಶ್ಮೀರದಲ್ಲಿ ನಡೆಯುತ್ತಿದ್ದ ಕಲ್ಲುತೂರಾಟ ನಿಂತಿದೆ ಎಂದು ಹೇಳಿದ್ದಾರೆ.