ದೇಶ

ಸುಕ್ಮಾ ನಕ್ಸಲ್ ದಾಳಿ: ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ರಾಜನಾಥ ಸಿಂಗ್

Manjula VN
ರಾಯ್ಪುರ: ಸುಕ್ಮಾ ನಕ್ಸಲರ ಭೀಕರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಅಂತಿಮ ನಮನ ಸಲ್ಲಿಸಿದ್ದಾರೆ. 
ಛತ್ತೀಸ್ಘಡದ ಸುಕ್ಮಾದ ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ 75 ಬೆಟಾಲಿಯನ್ ಪಡೆ ಭದ್ರತೆಯನ್ನು ಒದಗಿಸುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದಿದ್ದ 300ಕ್ಕೂ ಹೆಚ್ಚು ನಕ್ಸಲರು ಏಕಾಏಕಿ ಯೋಧರ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 25 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ, ಹಲವು ಯೋಧರಿಗೆ ಗಂಭೀರವಾದ ಗಾಯಗಳಾಗಿವೆ. 
ನಕ್ಸಲರ ದಾಳಿಯಲ್ಲಿ ಹುತಾತ್ಮರದಾ 25 ಯೋಧರಿಗೆ ಇಂದು ರಾಯ್ಪುರದಲ್ಲಿ ಅಂತಿನ ನಮನ ಸಲ್ಲಿಸಲಾಯಿತು. ಈ ವೇಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಜೊತೆಗೆ ಛತ್ತೀಸ್ಗಢ ರಾಜ್ಯ ಮುಖ್ಯಮಂತ್ರಿ ರಮಣ್ ಸಿಂಗ್, ಹನ್ಸ್"ರಾಜ್ ಅಹಿರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು. 
ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ರಾಜನಾಥ್ ಸಿಂಗ್ ಅವರು, ಯೋಧರ ಮೇಲಿನ ದಾಳಿಯನ್ನು ನಾವು ಸವಾಲಾಗಿ ಸ್ವೀಕರಿಸುತ್ತೇವೆ. ಎಡಪಂಥೀಯ ಉಗ್ರಗಾಮಿಗಳ ತಂತ್ರಗಳ ಕುರಿತಂತೆ ಪರಿಶೀಲನೆ ನಡೆಸಲಾಗುತ್ತದೆ. ಅಗತ್ಯ ಬಿದ್ದರೆ, ವಿವಿಧ ರಾಜ್ಯ ಸರ್ಕಾರಗಳ ಅಧಿಕಾರಿಗಳ ಜೊತೆಗೆ ಮೇ.8 ರಂದು ಸಭೆ ನಡೆಸುತ್ತೇವೆಂದು ಹೇಳಿದ್ದಾರೆ. 
ಇದೊಂದು ಹೇಡಿತನ, ಹತಾಶೆಯುತ ದಾಳಿಯಾಗಿದೆ. ನಕ್ಸಲರ ವಿರುದ್ಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕೈಜೋಡಿಸಿ ಕಾರ್ಯನಿರ್ವಹಿಸಲಿದೆ. ನಕ್ಸಲರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದೆ. ಹುತಾತ್ಮ ಯೋಧರ ತ್ಯಾಗ, ಬಲಿದಾನಗಳು ವ್ಯರ್ಥವಾಗುವುದಿಲ್ಲ ಎಂದು ತಿಳಿಸಿದ್ದಾರೆ. 
ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ದಾಳಿಯಲ್ಲಿ ಗಾಯಗೊಂಡ ಯೋಧರನ್ನು ಭೇಟಿಯಾದ ರಾಜನಾಥ ಸಿಂಗ್ ಅವರು ಮಾತುಕತೆ ನಡೆಸಿದ್ದಾರೆ. 

ರಾಯ್ಪುರದಲ್ಲಿರುವ ಬಾಲಾಜಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಇಂದು ಭೇಟಿ ನೀಡಿದ ರಾಜನಾಥ ಸಿಂಗ್ ಅವರು ಯೋಧರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದರು.
ಸುಕ್ಮಾ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈಗಾಗಲೇ ದಾಳಿ ಸಂಬಂಧ ವರದಿ ಸಲ್ಲಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ.
ದಾಳಿಗೆ ಛತ್ತೀಸ್ಗಢ ರಾಜ್ಯದ ಮುಖ್ಯಮಂತ್ರಿ ತೀವ್ರವಾಗಿ ಸಂತಾಪವನ್ನು ಸೂಚಿಸಿದ್ದು, ದಾಳಿಗೆ ಪ್ರತ್ಯುತ್ತ ನೀಡಲು ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
ಭವಿಷ್ಯದಲ್ಲಿ ಈ ರೀತಿಯ ದಾಳಿ ನಡೆದಾಗ ತಂತ್ರಕ್ಕೆ ಪ್ರತಿ ತಂತ್ರ ರೂಪಿಸುವುದು ಅಗತ್ಯವಿದೆ. ಹುತಾತ್ಮ ಯೋಧರ ಕುಟುಂಬಕ್ಕೆ ಈ ಮೂಲಕ ಸಂತಾಪವನ್ನು ಸೂಚಿಸುತ್ತೇನೆಂದು ರಮಣ್ ಅವರು ಹೇಳಿದ್ದಾರೆ. 
SCROLL FOR NEXT