ಮಾಜಿ ಸಂಸದೆ ಹಾಗೂ ನಟಿ ರಮ್ಯಾ
ಬೆಂಗಳೂರು: ಈ ದೇಶದಲ್ಲಿ ಗೋವುಗಳಿಗೆ ರಕ್ಷಣೆ ಇದೆ. ಆದರೆ, ದೇಶ ಕಾಯುವ ಯೋಧರಿಗೆ ಮಾತ್ರ ರಕ್ಷಣೆಯಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಕಿಡಿಕಾರಿದ್ದಾರೆ.
ಬಹುದಿನಗಳ ಕಾಲ ರಾಜಕೀಯ ವಲಯದಿಂದ ಕಾಣೆಯಾಗಿದ್ದ ರಮ್ಯಾ ಅವರು ಮಂಗಳವಾರ ಹಠಾತ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಸುಕ್ಮಾ ದಾಳಿ ಹಾಗೂ ಹಿಂದಿ ಭಾಷೆ ಹೇರಿಕೆ ಕುರಿತಂತೆ ಟ್ವೀಟ್ ಮಾಡಿರುವ ರಮ್ಯಾ, ಕೇಂದ್ರ ಬಗ್ಗೆ ಕಿಡಿ ಕೀರುವ ಮೂಲಕ ಈಗಲೂ ತಮ್ಮ ಮನಸ್ಥಿತಿ ಬಿಜೆಪಿ ವಿರುದ್ಧವಿದೆ ಎಂಬುದನ್ನು ಹಾಗೂ ಕಾಂಗ್ರೆಸ್ ನಲ್ಲಿಯೇ ಮುಂದುವರೆಯುವ ಸಂದೇಶವನ್ನು ರವಾನಿಸಿದ್ದಾರೆ.
ಛತ್ತೀಸ್ಗಢದ ಸುಕ್ಮಾದಲ್ಲಿ ಯೋಧರ ಮೇಲೆ ದಾಳಿ ಮಾಡಿದ್ದ ನಕ್ಸಲರು 25 ಸಿಆರ್'ಪಿಎಫ್ ಯೋಧರನ್ನು ಬಲಿಪಡೆದುಕೊಂಡಿದ್ದರು. ಇದಕ್ಕೆ ತೀವ್ರವಾಗಿ ಆಕ್ರೋಶಭರಿತರಾಗಿರುವ ರಮ್ಯಾ, ದೇಶದಲ್ಲಿ ಸಾಮಾನ್ಯ ನಾಗರಿಕರಿಗೆ, ಯೋಧರಿಗೆ ಭದ್ರತೆ ಇಲ್ಲ. ಕೇವಲ ಗೋವುಗಳಿಗೆ ಮಾತ್ರ ಎಂದು ಹೇಳಿದ್ದಾರೆ.
ಮೋದಿ ಸರ್ಕಾರದಲ್ಲಿ ಗೋವುಗಳು, ಕಾಲೆಳೆಯುವವರು ಮಾತ್ರ ಸುರಕ್ಷಿತ. ಬಿಜೆಪಿ ಸರ್ಕಾರದಲ್ಲಿ ಸೇನೆ, ಪ್ರಜೆಗಳು, ಆಧಾರ್ ಕಾರ್ಡ್ ಮಾಹಿತಿಗೆ ರಕ್ಷಣೆಯೇ ಇಲ್ಲ. ಕೇಂದ್ರ ಗೃಹ ಸಚಿವಾಲಯ, ಗುಪ್ತಚರ ಇಲಾಖೆಯ ವೈಫಲ್ಯದಿಂದಲೇ ಯೋಧರ ಹುತಾತ್ಮಕ್ಕೆ ಕಾರಣ. ಮೋದಿ ಸಿಎಂ ಆಗಿದ್ದಾಗ ದೂರವಾಣಿ ಕದ್ದಾಲಿಕೆಗೆ ಆಡಳಿತ ತಂತ್ರ ಬಳಸಿಕೊಂಡಿದ್ದರು. ಆದರೆ, ಯೋಧರ ರಕ್ಷಣೆಗೆ ಆಡಳಿತ ಯಂತ್ರ ಬಳಸಿಕೊಂಡಿಲ್ಲ ಎಂದು ಟೀಕೆ ಮಾಡಿದ್ದಾರೆ.
ಹಿಂದಿ ಭಾಷಾ ಹೇರಿಕೆ ಕುರಿತಂತೆಯೂ ಕೇಂದ್ರ ವಿರುದ್ಧ ಕಿಡಿಕಾರಿರು ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಬ್ಬ ಹರಿದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಟ್ವೀಟ್ ಮಾಡುತ್ತಾರೆ. ಆದರೆ, ಅವರ ಸರ್ಕಾರ ಬಲವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಹರಿಹಾಯ್ದಿದ್ದಾರೆ.
ಮೋದಿಯವರು ಕನ್ನಡ ರಾಜ್ಯೋತ್ಸವ ಸೇರಿದಂತೆ ವಿವಿಧ ಸಂದರ್ಭದಗಳಲ್ಲಿ ಆಯಾ ರಾಜ್ಯ ಭಾಷೆಗಳಲ್ಲಿ ಟ್ವೀಟ್ ಮಾಡುವ ಕ್ರಮವನ್ನು ರಮ್ಯಾ ಅವರು ಟೀಕೆ ಮಾಡಿದ್ದಾರೆ. ವೈವಿಧ್ಯತೆಯನ್ನು ಕಾಪಾಡುವುದಾಗಿ ಭಾಷಣ ಮಾಡುವ ಮೋದಿಯವರು ನಂತರ ಸದ್ದಿಲ್ಲದೆಯೇ ಹಿಂದಿ ಹೇರುತ್ತಿದ್ದಾರೆ. ಇದನ್ನು ಏನೆಂದು ಹೇಳಬೇಕೆಂದು ಪ್ರಶ್ನಿಸಿದ್ದಾರೆ.