ನವದೆಹಲಿ: ದೆಹಲಿಯ ಮೂರು ಮಹಾನಗರ ಪಾಲಿಕೆಗಳ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ನಿರೀಕ್ಷೆಯಂತೆಯೇ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.
ಕಳೆದ 14 ವರ್ಷಗಳಿಂದಲೂ ದೆಹಲಿ ಮಹಾನಗರ ಪಾಲಿಕೆಯ ಗದ್ದುಗೆಯನ್ನು ಬಿಜೆಪಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ 160 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ಗೆದ್ದಿದ್ದ 138 ವಾರ್ಡ್ ಗಳಲ್ಲಿ ಅಧಿಕಾರ ಕಾಯ್ದುಕೊಂಡಿರುವ ಬಿಜೆಪಿ ಹೆಚ್ಚುವರಿಯಾಗಿ 22 ಸ್ಥಾನಗಳನ್ನು ಗೆದ್ದಿದೆ
ದೆಹಲಿಯು 3 ಮಹಾನಗರ ಪಾಲಿಕೆಗಳಲ್ಲಿ ಒಟ್ಟು 272 ವಾರ್ಡ್ ಗಳನ್ನು ಹೊಂದಿದ್ದು, ಏಪ್ರಿಲ್ 23 ರಂದು ನಡೆದ ಚುನಾವಣೆಯಲ್ಲಿ ಶೇ.54ರಷ್ಟು ಮತದಾನವಾಗಿತ್ತು.
ಪ್ರಸ್ತುತ ಇರುವ ಅಂಕಿ ಅಂಶಗಳ ಪ್ರಕಾರ ಬಿಜೆಪಿ ಭರ್ಜರಿ ಮೇಲುಗೈ ಸಾಧಿಸಿದ್ದು, ಸತತ ಮೂರನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ 2 ನೇ ಸ್ಥಾನದಲ್ಲಿದ್ದರೆ ದೆಹಲಿಯ ಜನತೆ ಕಾಂಗ್ರೆಸ್ ನ್ನು 3 ನೇ ಸ್ಥಾನಕ್ಕೆ ತಳ್ಳಿದ್ದಾರೆ
ಪ್ರಧಾನಿ ಮೋದಿಯವರ ಅಲೆಯ ನಡುವೆಯೂ ಪಾಲಿಕೆ ಚುನಾವಣೆಯಲ್ಲಿ ಬಹುಮತ ಗಳಿಸುವ ವಿಶ್ವಾದಲ್ಲಿದ್ದ ಕೇಜ್ರಿವಾಲ್ ಅವರ ಲೆಕ್ಕಾಚಾರ ತಲೆಕೆಳಗಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 7 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಬಾಚಿಕೊಂಡಿತ್ತು. 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿತ್ತು. ಆದರೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಈ ಹಿಂದೆ ಮತಗಟ್ಟೆ ಸಮೀಕ್ಷೆಗಳು ಹೇಳಿತ್ತು. ಇದರಂತೆ ನಿರೀಕ್ಷೆಯಂತೆಯೇ ಬಿಜೆಪಿ ಸ್ಪಷ್ಟ ಬಹುಮತ ಸಾಬೀತುಪಡಿಸಿದೆ.