ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ
ನವದೆಹಲಿ: ದೆಹಲಿ ಮಹಾನಗರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲು ಕಂಡಿದ್ದು, ಸೋಲಿನ ಪರಾಮರ್ಶೆ ನಡೆಸುತ್ತೇವೆಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಬುಧವಾರ ಹೇಳಿದ್ದಾರೆ.
ಪಾಲಿಕೆ ಚುನಾವಣಾ ಫಲಿತಾಂಶ ಕುರಿಂತತೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಇಷ್ಟೊಂದು ಸೀಟುಗಳನ್ನು ಗೆದ್ದಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸೋಲು ಕುರಿತು ಪರಾಮರ್ಶೆ ನಡೆಸಿ, ಕಾರಣಗಳನ್ನು ಕಂಡುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಕಳೆದ 10 ವರ್ಷಗಳಿಂದಲೂ ಅಧಿಕಾರ ನಡೆಸುತ್ತಿದೆ. ಆದರೆ, ಯಾವುದೇ ಕೆಲಸಗಳನ್ನು ಮಾಡಿಲ್ಲ. ಭ್ರಷ್ಟಾಚಾರ, ಡೆಂಘೀ, ಚಿಕೂನ್ ಗೂನ್ಯಾ ಮತ್ತು ಮಾಲಿನ್ಯವನ್ನು ಹರಡಿಸಿದೆ. ಇಷ್ಟೆಲ್ಲಾ ಮಾಡಿದ್ದರೂ ಬಿಜೆಪಿ ಇಷ್ಟೊಂದು ಸೀಟು ಗೆದ್ದಿದೆ ಎಂದರೆ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಆಮ್ ಆದ್ಮಿ ಪಕ್ಷ ಕಾರ್ಯನಿರ್ವಹಿಸುತ್ತಿದೆ. ನಾವೂ ಕೂಡ ಕೆಲ ತಪ್ಪುಗಳನ್ನು ಮಾಡಿರುತ್ತೇವೆ. ಎಂದಿನಂತೆ ಆ ತಪ್ಪುಗಳನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. 2-3 ಸೀಟುಗಳ ಅಂತರದಲ್ಲಿ ಸೋಲು ಕಂಡಿದ್ದರೆ ಫಲಿತಾಂಶವನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ, ಪ್ರಸ್ತುತ ಬಂದಿರುವ ಫಲಿತಾಂಶವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇವಿಎಂ ಗೋಲ್ ಮಾಲ್ ಇಲ್ಲದೆಯೇ ಬಿಜೆಪಿ ಈ ಮಟ್ಟಕ್ಕೆ ಗೆಲವು ಸಾಧಿಸಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.
2009ರಲ್ಲಿ ಸೋಲು ಕಂಡ ಬಳಿಕ ಸ್ವತಃ ಬಿಜೆಪಿಯೇ ಇವಿಎಂ ವಿರುದ್ಧ ಆರೋಪ ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರತ್ತು. ಇದೀಗ ಅವರೇ ಇವಿಎಂ ಗೋಲ್ ಮಾಲ್ ಮೂಲಕ ಗೆಲವು ಸಾಧಿಸುತ್ತಿದ್ದಾರೆ. ಗೆಲುವಿನ ಹಿಂದಿರುವ ರಹಸ್ಯದ ಕುರಿತಂತೆ ಚುನಾವಣಾ ಆಯೋಗವಾಗಲೀ, ತಜ್ಞರಾಗಲೀ ಈವರೆಗೂ ಯಾವುದೇ ಉತ್ತರವನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.