ಇಂಫಾಲ: ಮಣಿಪುರದಲ್ಲಿ ಕಾಂಗ್ರೆಸ್ ಗೆ ಮತ್ತೊಂದು ಹೊಡೆತ ಬಿದ್ದಿದ್ದು, ಇತ್ತೀಚೆಗಷ್ಟೇ ಇಬ್ಬರು ಶಾಸಕರು ಬಿಜೆಪಿ ಸೇರಿದ ಬೆನ್ನಲ್ಲೇ ಈಗ ನಾಲ್ವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಸುರ್ಚಂದ್ರ, ನಗಾಂಥಂಗ್ ಹಾಕಿಪ್, ಒ ಲುಖಾಯ್ ಮತ್ತು ಎಸ್ ಬಿರಾ ಬಿಜೆಪಿ ಸೇರ್ಪಡೆಗೊಂಡಿರುವ ಕಾಂಗ್ರೆಸ್ ಶಾಸಕರಾಗಿದ್ದು, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಭಬನಾದಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಮಣಿಪುರ ವಿಧಾನಸಭಾ ಚುನವಣೆಯಾದ ಬಳಿಕ ಟಿ ಶ್ಯಾಮಕುಮಾರ್ ಬಿಜೆಪಿ ಸೇರ್ಪಡೆಗೊಂಡ ಮೊದಲ ಕಾಂಗ್ರೆಸ್ ಶಾಸಕರಾಗಿದ್ದರು. ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಮಾ.15 ರಂದು ಬಿರೇನ್ ಸಿಂಗ್ ಸಂಪುಟದಲ್ಲಿ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದರು. ಇದಾದ ಬಳಿಕ ಮತ್ತೋರ್ವ ಶಾಸಕ ಗಿನ್ಸುವಾನ್ ಝೌಮ್ ಸಹ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಈಗ ಕಾಂಗ್ರೆಸ್ ನ 4 ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದು, ಕಾಂಗ್ರೆಸ್ ನ ಶಾಸಕರ ಸಂಖ್ಯೆ 28 ರಿಂದ 22 ಕ್ಕೆ ಕುಸಿದಿದೆ.