ನವದೆಹಲಿ: ಮುಂಬೈನ ಬಾಲಕನನ್ನು ಬಲಿ ಪಡೆದ ಬ್ಲೂ ವೇಲ್ ಆತ್ಮಹತ್ಯೆ ಆನ್ ಲೈನ್ ಆಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗುರುವಾರ ರಾಜ್ಯಸಭೆಯಲ್ಲಿ ಸಂಸದರು ಆಗ್ರಹಿಸಿದ್ದಾರೆ.
ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಅಮರ್ ಶಂಕರ್ ಸಬ್ಲೆ ಅವರು, ಮುಂಬೈನ ಅಂಧೇರಿಯ ಬಾಲಕ ಮನ್ ಪ್ರೀತ್ 50 ದಿನಗಳ ಕಾಲ ಬ್ಲೂ ವೇಲ್ ಆಟ ಆಡಿದ ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಯುವಕರು ಬ್ಲೂ ವೇಲ್ ಗೆ ದಾಸರಾಗದಂತೆ ತಡೆಯಲು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಆನ್ ಲೈನ್ ನಲ್ಲಿ ಇದೇ ರೀತಿಯ ಇತರೆ ಕೆಲವು ಆಟಗಳಿದ್ದು, ಅವು ಸಹ ಬಹಳ ಆಕರ್ಷಕ ಮತ್ತು ವ್ಯಸನಕಾರಿಯಾಗಿವೆ ಎಂದು ಬಿಜೆಪಿಯ ಮತ್ತೊಬ್ಬ ಸದಸ್ಯ ಅವರ ವಿಕಾಸ್ ಮಹಾತ್ಮೆ ಅವರು ಹೇಳಿದ್ದಾರೆ.
ಇನ್ನು ಬಿಜೆಪಿ ಸದಸ್ಯರಿಗೆ ಧ್ವನಿಗೂಡಿಸಿದ ಸಮಾಜವಾದಿ ಪಕ್ಷದ ಸಂಜಯ್ ಸೇಠ್ ಅವರು, ಅಂತಹ ಗೇಮ್ ಗಳನ್ನು ವೆಬ್ ಸೈಟ್ ನಿಂದ ತೆಗೆದು ಹಾಕಲು ಕಾನೂನು ರೂಪಿಸಬೇಕು ಎಂದರು.
ಬ್ಲೂವೇಲ್ ಚಾಲೆಂಜ್ ಎಂಬ ಆನ್ ಲೈನ್ ಗೇಮ್ ದಾಸನಾಗಿದ್ದ ಮನ್ ಪ್ರೀತ್ ಸಿಂಗ್, ಗೇಮ್ ಪ್ರಕಾರ ಗ್ರೂಪ್ ಅಡ್ಮಿನಿಸ್ಟ್ರೇಟರ್ ಗೇಮ್ ನಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗೆ 50 ದಿನಗಳಲ್ಲಿ ಹಲವು ಟಾಸ್ಕ್ ಗಳನ್ನು ನೀಡುತ್ತಾರೆ.
ಎಲ್ಲಾ ಹಂತದ ಲೆವೆಲ್ ಗಳನ್ನು ದಾಟಿದ ನಂತರ ಅಂತಿವನಾಗಿ ಫೈನಲ್ ನಲ್ಲಿ ಗೆಲ್ಲಬೇಕೆಂದರೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಅದರಂತೆ ಮನ್ ಪ್ರೀತ್ ಎಲ್ಲಾ ಲೆವಲ್ ಗಳನ್ನು ದಾಟಿ ಫೈನಲ್ ಪ್ರವೇಶಿಸಿದ್ದು, ಕಳೆದ ಶನಿವಾರ ಸಂಜೆ 5 ಗಂಟೆ ಸುಮಾರಿಗೆ, ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಇದು ಭಾರತದಲ್ಲಿ ಈ ಗೇಮ್ ಗೆ ಬಲಿಯಾದ ಮೊದಲ ಬಾಲಕ ಎನ್ನಲಾಗಿದೆ. ಇತರೆ ದೇಶಗಳಲ್ಲಿ ಈ ಗೇಮ್ 130ಕ್ಕೂ ಹೆಚ್ಚು ಯುವಕರು ಬಲಿಯಾಗಿದ್ದಾರೆ.