ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ ಕೌಂಟರ್ ನಡೆಸಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ಶುಕ್ರವಾರ ತಿಳಿದುಬಂದಿದೆ.
ಅನಂತ್ ನಾಗ್ ಜಿಲ್ಲೆಯ ಬಿಜ್ಬೆಹರಾದಲ್ಲಿರುವ ಕನಿಬಾಲ್ ಎಂಬಲ್ಲಿ ಕಳೆದ ರಾತ್ರಿ ಸೇನಾಪಡೆ ಎನ್ ಕೌಂಟರ್ ನಡೆಸಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸ್ಥಳೀಯ ಉಗ್ರ ಯವಾರ್ ಎಂಬಾತನನ್ನು ಹತ್ಯೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಗುಪ್ತಚರ ಇಲಾಖೆ ನೀಡಿದ್ದ ಮಾಹಿತಿ ಮೇರೆಗೆ ಕಳೆದ ರಾತ್ರಿ ಸೇನಾಪಡೆ ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಉಗ್ರ ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದ. ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಡಗಿ ಕುಳಿತಿದ್ದ ಉಗ್ರನನ್ನು ಹತ್ಯೆ ಮಾಡಿದೆ. ಸ್ಥಳದಲ್ಲಿದ್ದ ಇನ್ನೂ ಇಬ್ಬರು ಉಗ್ರರು ಕತ್ತಲಿದ್ದ ಹಿನ್ನಲೆಯಲ್ಲಿ ತಪ್ಪಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಓರ್ವ ಯೋಧರನಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಯಾಗಿರುವ ಉಗ್ರ ಯವಾರ್ ತಿಂಗಳ ಹಿಂದಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರ್ಪಡೆಗೊಂಡಿದ್ದ. ಅಲ್ಲದೆ, ಕಾಶ್ಮೀರದಲ್ಲಿ ದೀರ್ಘಕಾಲದ ಕಲ್ಲು ತೂರಾಟಗಾರನಾಗಿ ಉಗ್ರ ಸಂಘಟನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ. ಇದಲ್ಲದೆ. ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ ಈತ ಸೆಲ್ಫ್ ಲೋಡಿಂಗ್ ರೈಫಲ್ ಕಸಿದು ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಎನ್ ಕೌಂಟರ್ ನಡೆದ ಸ್ಥಳದಲ್ಲಿ ವ್ಯಕ್ತಿಯೊಬ್ಬನ ದೇಹ ಕೂಡ ಪತ್ತೆಯಾಗಿದ್ದು, ಗುಂಡೇಟಿನಿಂದ ಮೃತಪಟ್ಟಿರುವುದ್ದಾನೆಂದು ತಿಳಿದುಬಂದಿದೆ. ವ್ಯಕ್ತಿ ಕುರಿತಂತೆ ಈ ವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲಸ. ಪ್ರಸ್ತುತ ಸ್ಥಳದಲ್ಲಿ 1 ದ್ವಿಚಕ್ರ ವಾಹನ, 2 ಮೊಬೈಲ್ ಫೋನ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಾಹನದ ಮೇಲಿನ ನಂಬರ್ ಪ್ಲೇಟ್ ಕೂಡ ಹಾಳಾಗಿದ್ದು, ಯಾವುದೇ ಗುರುತಿನ ಚೀಟಿ ಕೂಡ ಪತ್ತೆಯಾಗಿಲ್ಲ. ಫೋನ್ ನಲ್ಲಿರುವ ಸಂಖ್ಯೆಗಳೂ ಯಾವುದೇ ರೀತಿಯ ಸಹಾಯಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಸ್ಥಳೀಯ ಪೊಲೀಸರು ವ್ಯಕ್ತಿಯ ಭಾವಚಿತ್ರವನ್ನು ಬಿಡುಗಡೆ ಮಾಡಿದೆ. ಇನ್ನು ಹತ್ಯೆಯಾದ ಉಗ್ರ ಯವಾರ್ ಮೃತದೇಹವನ್ನು ಆತನ ಪೋಷಕರಿಗೆ ಒಪ್ಪಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದ ಹಲವೆಡೆ ನಿರ್ಬಂಧ ಹೇರಲಾಗಿದೆ ಎಂದು ವರದಿಗಳು ತಿಳಿಸಿವೆ.