ರಕ್ಷಾ ಬಂಧನದ ದಿನದಂದು ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಸ್ಲಿಂ ಬಾಲಕಿ ನಿರ್ಧಾರ!
ಅಹಮದಾಬಾದ್: ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಲು ಮುಂದಾಗಿರುವ ಗುಜರಾತ್ ರಾಜ್ಯದ ಅಹಮದಾಬಾದ್ ಮೂಲದ 14 ವರ್ಷದ ಮುಸ್ಲಿಂ ಬಾಲಕಿಯೊಬ್ಬಳು ರಕ್ಷಾ ಬಂಧನದ ದಿನದಂದು ಶ್ರೀನಗರದ ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರ್ಧರಿಸಿದ್ದಾಳೆ.
ತಂಝೀಮ್ ಮೆರಾನಿ ಎಂಬ ಮುಸ್ಲಿಂ ಬಾಲಕಿ ರಕ್ಷಾ ಬಂಧನದ ದಿನದಂದು ಶ್ರೀನಗರದ ಲಾಲ್ ಚೌಕ್ ಬಳಿ ತಿರಂಗ ಧ್ವಜ ಹಾರಿಸುವ ಇಂಗಿತ ವ್ಯಕ್ತಪಡಿಸಿದ್ದಾಳೆ. ಇದರ ಜೊತೆಗೆ ದೇಶದ ರಕ್ಷಣೆಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಗಡಿ ಕಾಯುತ್ತಿರುವ ಯೋಧರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಲು ಮುಂದಾಗಿದ್ದಾಳೆ.
ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಲಾಲ್ ಚೌಕ್ ಬಳಿ ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ಹೋಗುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲಿಯೇ ತಡೆಯಲಾಗಿತ್ತು. ಆದರೆ, ಈ ಬಾರಿ ಖಂಡಿತವಾಗಿಯೂ ಧ್ವಜವನ್ನು ಹಾರಿಸುತ್ತೇನೆ. ರಕ್ಷಾ ಬಂಧನ ಸಹೋದರ ಹಾಗೂ ಸಹೋದರಿಯರ ಹಬ್ಬವಾಗಿದ್ದು, ಈ ಹಿನ್ನಲೆಯಲ್ಲಿ ಸೇನಾ ಸಹೋದರರಿಗೆ ರಾಖಿ ಕಟ್ಟುತ್ತೇನೆಂದು ತಂಝೀಮ್ ಹೇಳಿಕೊಂಡಿದ್ದಾಳೆ.
ಇನ್ನು ತಂಝೀಮ್ ನ ಈ ನಿರ್ಧಾರಕ್ಕೆ ಆಕೆಯ ಪೋಷಕರೂ ಕೂಡ ಬೆಂಬಲ ನೀಡಿದ್ದಾರೆ. ಈ ರೀತಿಯ ಕಾರ್ಯ ಮಾಡಲು ಇದು ಸಕಾಲವಲ್ಲ. ಆದರೆ, ಇನ್ನೆಷ್ಟು ದಿನಗಳ ಕಾಯಬೇಕು. ಈ ರೀತಿಯ ಹೆಜ್ಜೆಯನ್ನು ಯಾರಾದರೂ ತೆಗೆದುಕೊಳ್ಳಬೇಕಿತ್ತು. ಇದೀಗ ನನ್ನ ಮಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಿಂದೂ ಹಾಗೂ ಮುಸ್ಲಿಮರ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಮೂಡಿಸಿದ್ದು ಯಾರು?...ಅವರಿಗೆ ಬೇರೆ ಬೇರೆ ಬಣ್ಣದ ರಕ್ತವಿದೆಯೇ?...ಎಂದು ತಂಝೀಮ್ ತಂದೆ ಪ್ರಶ್ನಿಸಿದ್ದಾರೆ.
ರಕ್ಷಾ ಬಂಧನ ಒಂದು ಹಬ್ಬವಷ್ಟೇ...ಅಲ್ಲಿಗೆ ಬೇಕಾದರೂ ಹೋಗಿ ಆಚರಿಸುವ ಹಕ್ಕು ನಮಗಿದೆ. ನನ್ನ ಮಗಳೊಂದಿಗೆ ನಾನು ಸದಾಕಾಲ ನಿಲ್ಲುತ್ತೇನೆ. ಇದೊಂದು ಹಬ್ಬವಾಗಿದ್ದು, ಹಿಂದೂ ಹಾಗೂ ಮುಸ್ಲಿಮರೆಂದು ಏಕೆ ವಿಭಾಗಿಸಬೇಕು?...ಹಿಂದೂ ಮತ್ತು ಮುಸ್ಲಿಂ ಏಕತಾ ಸಂದೇಶ ಸಾರುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.