ನವದೆಹಲಿ: ಫ್ಲೆಕ್ಸಿ ಶುಲ್ಕ ಯೋಜನೆಯಡಿ ರೈಲ್ವೆ ಇಲಾಖೆ ಒಂದೇ ವರ್ಷದಲ್ಲಿ ಸುಮಾರು 540 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಗಳಿಸಿದ್ದು ಈ ಯೋಜನೆಯನ್ನು ನಿಲ್ಲಿಸುವ ಯೋಜನೆಯಿಲ್ಲ ಎಂದು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 9ರಂದು ಫ್ಲೆಕ್ಸಿ ಶುಲ್ಕ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇದು ರಾಜಧಾನಿ, ಶತಾಬ್ದಿ ಮತ್ತು ಡುರೊಂಟೊ ರೈಲುಗಳಿಗೆ ಅನ್ವಯಿಸುತ್ತದೆ. ಈ ರೈಲುಗಳಲ್ಲಿ ಶೇಕಡಾ 10ರಷ್ಟು ಸೀಟುಗಳನ್ನು ಸಾಮಾನ್ಯ ಶುಲ್ಕಕ್ಕೆ ಮಾರಾಟ ಮಾಡಲಾಗುತ್ತದೆ.
ಫ್ಲೆಕ್ಸಿ ಫೇರ್ ಶುಲ್ಕ ವ್ಯವಸ್ಥೆಯಿಂದ ಸಾಕಷ್ಟು ಆದಾಯ ಬರುತ್ತಿರುವುದರಿಂದ ಅದನ್ನು ನಿಲ್ಲಿಸುವ ಯೋಚನೆಯಿಲ್ಲ. ಈ ಯೋಜನೆ ಆರಂಭವಾದ ನಂತರ ಹೆಚ್ಚುವರಿ 85,000 ಪ್ರಯಾಣಿಕರನ್ನು ಸಂಪಾದಿಸಿದ್ದೇವೆ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.
ಸೆಪ್ಟೆಂಬರ್ 2016ರಿಂದ ಜೂನ್ 30, 2017ರವರೆಗೆ 540 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬಂದಿದೆ ಎಂದು ಅಧಿಕಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ಯೋಜನೆಯನ್ನು ನಿರಂತರವಾಗಿ ಪರಾಮರ್ಶಿಸಲಾಗುತ್ತಿದ್ದು ರೈಲುಗಳಲ್ಲಿ ಖಾಲಿ ಸೀಟುಗಳನ್ನು ಪರಿಶೀಲಿಸಿದ ನಂತರ ಕಳೆದ ಡಿಸೆಂಬರ್ ನಲ್ಲಿ ಪರಾಮರ್ಶೆ ನಡೆಸಲಾಗಿತ್ತು. ಕೊನೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರನ್ನು ಆಕರ್ಷಿಸಲು ಫ್ಲೆಕ್ಸಿ ದರ ರಚನೆಯಲ್ಲಿ ರೈಲ್ವೆ ಇಲಾಖೆ ಬದಲಾಣೆ ಮಾಡಿದ್ದು ರಿಯಾಯಿತಿಯನ್ನು ಜಾರಿಗೆ ತಂದಿದೆ.
ಈ ಮೂರು ಪ್ರಮುಖ ರೈಲುಗಳಲ್ಲಿ ತತ್ಕಾಲ್ ಟಿಕೆಟ್ ಶುಲ್ಕದಲ್ಲಿ ಶೇಕಡಾ 30ರಷ್ಟು ಬಿಟ್ಟುಬಿಡಲಾಗಿದೆ. ರಾಜಧಾನಿ, ಶತಾಬ್ದಿ ಮತ್ತು ಡುರೊಂಟೊ ರೈಲುಗಳಲ್ಲಿ ಪ್ರಯಾಣಕ್ಕೆ ಹೊರಡುವ ಮುನ್ನ ಮೊದಲ ಚಾರ್ಟ್ ಹಾಕಿದ ನಂತರ ಬರ್ತ್ ಗಳು ತುಂಬದೆ ಉಳಿದರೆ ಮೂಲ ದರಕ್ಕೆ ಶೇಕಡಾ 10ರಿಂದ ಶೇಕಡಾ 30ರಷ್ಟು ರಿಬೇಟ್ ನೀಡಲಾಗುತ್ತದೆ.
ಕಳೆದ ಸೆಪ್ಟೆಂಬರ್ ನಿಂದ ಜೂನ್ ವರೆಗೆ ಡುರೊಂಡೊ ರೈಲು 140 ಕೋಟಿ ರೂಪಾಯಿ ಫ್ಲೆಕ್ಸಿ ಫೇರ್ ಶುಲ್ಕದಿಂದ ಆದಾಯ ಗಳಿಸಿದರೆ ಶತಾಬ್ದಿ ರೈಲಿಗೆ 120 ಕೋಟಿ ರೂಪಾಯಿ ಆದಾಯ ಮಾಡಿಕೊಂಡಿದೆ.
ಪ್ರಸ್ತುತ ದೇಶದಲ್ಲಿ 42 ರಾಜಧಾನಿ, 46 ಶತಾಬ್ದಿ ಮತ್ತು 54 ಡುರೊಂಟೊ ರೈಲುಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics