ನವದೆಹಲಿ; ಲಷ್ಕರ್-ಇ-ತೊಯ್ಬಾ, ಜೈಶ್-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳ ತಾಣವಾಗುತ್ತಿರುವ ಕಾಶ್ಮೀರಕ್ಕೆ ಇದೀಗ ಅಂತರಾಷ್ಟ್ರೀಯ ಉಗ್ರ ಸಂಘಟನೆ ಅಲ್ ಖೈದ್ ಪ್ರವೇಶ ಮಾಡಿದೆ ಎಂದು ಹೇಳಲಾಗುತ್ತಿದೆ.
ಆಗಸ್ಟ್ 1 ರಂದು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಅಬು ದುಜಾನಾ ಹಾಗೂ ಆರೀಫಾ ಲೆಲ್ಹಾರಿ ಎಂಬ ಉಗ್ರರು ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಮಾಂಡರ್ ಗಳು ಅಲ್ಲ. ಅವರಿಬ್ಬರೂ ಅಲ್ ಖೈದಾ ಸಂಘಟನೆಯವರು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ದೇಶದಲ್ಲಿ ಅಲ್ ಖೈದಾ ಉಗ್ರರ ಮೊದಲ ಬಲಿ ಆದಂತಾಗಿದೆ ಎಂಬ ಸುದ್ದಿ ಇದೀಗ ಕಾಶ್ಮೀರದಲ್ಲಿ ಹರಿದಾಡತೊಡಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಸಾಯುವ ಮುನ್ನ ಬಂಧುಗಳಿಗೆ ದೂರವಾಣಿ ಕರೆ ಮಾಡಿದ್ದ ದುಜಾನಾ, ತಾನೂ ಹಾಗೂ ಆರೀಫ್ ಅಲ್ ಖೈದಾ ಸಂಘಟನೆಯವರಾಗಿದ್ದು, ಸಾವನ್ನಪ್ಪಿದ ಬಳಿಕ ನಮ್ಮ ಶವದ ಮೇಲೆ ಪಾಕಿಸ್ತಾನದ ಬಲಗಿದೆ ಅಲ್ ಖೈದಾ ಧ್ವಜ ಹೊದಿಸುವಂತೆ ಹೇಳಿಕೊಂಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಅಲ್ಲದೆ, ಅಲ್ ಖೈದಾ ಕಾಶ್ಮೀರ ಘಟಕ ಅನ್ರ್ ಘಜ್ವಾತ್ ಉಲ್ ಹಿಂದ್ ಸಂಘಟನೆಯ ಮುಖ್ಯಸ್ಥ ಝಾಕೀರ್ ಮುಸಾ ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಹತ ಉಗ್ರರಿಬ್ಬರೂ ಅಲ್ ಖೈದಾದವರು ಎಂದು ಹೇಳಿಕೊಂಡಿದ್ದಾನೆ.
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ತೊರೆದು ಅಲ್ ಖೈದಾ ಸೇರಿರುವ ಮುಸಾನ ಧ್ವನಿ, ಆತ ಹಿಂದೆ ಬಿಡುಗಡೆ ಮಾಡಿದ್ದ ಆಡಿಯೋ ಕ್ಲಿಪ್ ಗಳ ಜತೆ ಹೊಂದಾಣಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇನ್ನು ನಾವು ಖಚಿತಪಡಿಸಲಾಗದು ಎಂದು ಡಿಜಿಪಿ ಎಸ್.ಪಿ.ವೈದ್ ಅವರು ತಿಳಿಸಿದ್ದಾರೆ.
2003ರಿಂದಲೂ ಅಲ್ ಖೈದಾ ಕಾಶ್ಮೀರದಲ್ಲಿ ಚಟುವಟಿಕೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಅವರ ಹೇಳಿಕೆ ಹಿಂದೆ ಇರುವ ತಂತ್ರಗಳೇನು ಎಂಬುದನ್ನು ನೋಡಬೇಕಿದೆ. ಆದರೆ ಏನೇಯಿದ್ದರೂ ನಮ್ಮ ಪ್ರಕಾರ ಉಗ್ರರು ಉಗ್ರರೇ...ಅವರು ಯಾವುದೇ ಸಂಘಟನೆಗೆ ಸೇರಿದ್ದರೂ ಅವರು ಉಗ್ರರೇ ಆಗಿರುತ್ತಾರೆಂದು ವೈದ್ ಹೇಳಿದ್ದಾರೆ.