ಮುಂಬೈ: ಕೃಷ್ಣ ಜನ್ಮಾಷ್ಠಮಿ ದಿನದ ಅಂಗವಾಗಿ ನಡೆಯುವ ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸಲು 14 ವರ್ಷದೊಳಗಿನ ಮಕ್ಕಳಿಗೆ ಅವಕಾಶ ನೀಡುವುದಿಲ್ಲ ಎಂಬ ಮಹಾರಾಷ್ಟ್ರ ಸರ್ಕಾರದ ಆದೇಶಕ್ಕೆ ಸೋಮವಾರ ಬಾಂಬೆ ಹೈಕೋರ್ಟ್ ಒಪ್ಪಿಗೆ ನೀಡಿದೆ.
ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹಾಗೂ ಮಾನವ ಪಿರಾಮಿಡ್ ಎತ್ತರಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿ ನಗರದ ಇಬ್ಬರು ನಾಗರಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಮೂರ್ತಿಗಳಾದ ಬಿ ಆರ್ ಗವಾಯಿ ಹಾಗೂ ಎಂಎಸ್ ಕಾರ್ನಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಮಾನವ ಪಿರಾಮಿಡ್ ಎತ್ತರಕ್ಕೆ ಮಿತಿ ವಿಧಿಸಲು ನಿರಾಕರಿಸಿದೆ.
ದಹಿ ಹಂಡಿ ಉತ್ಸವದಲ್ಲಿ ಎಷ್ಟು ವರ್ಷದವರು ಭಾಗವಹಿಸಬೇಕು ಮತ್ತು ಮಾನವ ಪಿರಾಮಿಡ್ ಎಷ್ಟು ಎತ್ತರವಿರಬೇಕು ಎಂಬುದರ ಬಗ್ಗೆ ಹೈಕೋರ್ಟ್ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಅದನ್ನು ರಾಜ್ಯ ಸರ್ಕಾರ ಮಾಡುತ್ತದೆ ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ದಹಿ ಹಂಡಿ ಉತ್ಸವದಲ್ಲಿ 14ವರ್ಷದೊಳಗಿನ ಮಕ್ಕಳು ಭಾಗವಹಿಸಬಾರದು ಎಂಬ ಮಹಾರಾಷ್ಟ್ರ ಸರ್ಕಾರದ ಹೇಳಿಕೆಯನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ನ್ಯಾಮೂರ್ತಿ ಗವಾಯಿ ಹೇಳಿದ್ದಾರೆ.
ದಹಿ ಹಂಡಿ ಉತ್ಸವ ಒಂದು ಸಾಹಸ ಸ್ಪರ್ಧೆಯಾಗಿದ್ದು, ಬಾಲ ಕಾರ್ಮಿಕ ಕಾಯ್ದೆ ಪ್ರಕಾರ 14 ವರ್ಷದೊಳಗಿನ ಮಕ್ಕಳು ಭಾಗವಹಿಸಲು ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರು ಕೋರ್ಟ್ ತಿಳಿಸಿದ್ದಾರೆ.