ನವದೆಹಲಿ: ಚಂಡೀಗಢದಲ್ಲಿ ಹರ್ಯಾಣದ ಬಿಜೆಪಿ ನಾಯಕನ ಪುತ್ರ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಮತ್ತು ಅಪರಾಧಿಗಳ ಜೊತೆ ಸೇರಿಕೊಂಡು ಒಳಸಂಚು ನಡೆಸಬಾರದು ಎಂದು ಒತ್ತಾಯಿಸಿದ್ದಾರೆ.
ಹರ್ಯಾಣ ಬಿಜೆಪಿ ಮುಖ್ಯಸ್ಥ ಸುಭಾಶ್ ಬರಲಾ ಅವರ ಪುತ್ರ ವಿಕಾಸ್ ಮತ್ತು ಆತನ ಸ್ನೇಹಿತ ಆಶಿಶ್ ಕುಮಾರ, ಹುಡುಗಿಯೊಬ್ಬಳಿಗೆ ಚುಡಾಯಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೀಡಾಗಿ ನಂತರ ಜಾಮೀನು ಮೇಲೆ ಹೊರಬಂದಿದ್ದಾರೆ. ಈ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ರಾಹುಲ್ ಗಾಂಧಿ, ಚಂಡೀಗಢದಲ್ಲಿ ಯುವತಿಯನ್ನು ಅಪಹರಿಸಿ ಕಿರುಕುಳ ನೀಡಲು ಯತ್ನಿಸಿದ ಘಟನೆಯನ್ನು ಖಂಡಿಸುತ್ತೇನೆ. ಅಪರಾಧಿಗಳಿಗೆ ಬಿಜೆಪಿ ಸರ್ಕಾರ ಶಿಕ್ಷೆ ನೀಡಬೇಕು. ಅಪರಾಧಿಗಳ ಜೊತೆ ಒಳ ಸಂಚು ರೂಪಿಸಿ ಅಂಥವರ ಮನಸ್ಥಿತಿಯನ್ನು ಒಪ್ಪಬಾರದು ಎಂದು ಟ್ವೀಟ್ ಮಾಡಿದ್ದಾರೆ.
ಚಂಡೀಗಢದ ಬಿಜೆಪಿ ನಾಯಕರ ಪುತ್ರ ವಿಕಾಸ್ ಮತ್ತು ಆತನ ಸ್ನೇಹಿತ ಆಶಿಶ್ ಕುಮಾರ್ ಕಳೆದ ಶುಕ್ರವಾರ ರಾತ್ರಿ ತನ್ನನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಿದ್ದರು ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಇಬ್ಬರೂ ಭಾರತೀಯ ದಂಡ ಸಂಹಿತೆ 354 ಡಿ ಮತ್ತು 185ರಡಿ ಮೋಟಾರ್ ವಾಹನ ಕಾಯ್ದೆಯಡಿ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.