ಹುರಿಯತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿ
ನವದೆಹಲಿ: ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಪ್ರತ್ಯೇಕತಾವಾದಿಗಳು ಪಾಕಿಸ್ತಾನದಿಂದ ಆರ್ಥಿಕ ನೆರವು ಪಡೆಯುತ್ತಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಹುರಿಯತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿಯವರ ಪುತ್ರ ನಸೀಮ್ ಗಿಲಾನಿಯವರನ್ನು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಮಂಗಳವಾರ ವಿಚಾರಣೆಗೊಳಪಡಿಸಿದೆ.
ಇಂದು ಬೆಳಿಗ್ಗೆ 11 ಗಂಟೆ ಎನ್ಐಎ ಮುಖ್ಯ ಕಚೇರಿಗೆ ಬಂದ ಗಿಲಾನಿ ಸಹೋದರರು ಹಾಗೂ ಪುತ್ರ ನಸೀಮ್ ನನ್ನು ವಿಚಾರಣೆಗೊಳಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಿಲಾನಿ ಪುತ್ರ ನಸೀಮ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಪಾಕಿಸ್ತಾನದಿಂದ ಆರ್ಥಿಕ ನೆರವು ಪಡೆಯಲಾಗುತ್ತಿದೆ ಎಂಬ ಪ್ರಕರಣ ಸಂಬಂಧ ಈ ಹಿಂದೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ಆಧರೆ, ಅನಾರೋಗ್ಯದಿಂದ ಶ್ರೀನಗರ ಆಸ್ಪತ್ರೆಗೆ ದಾಖಲಾಗಿದ್ದ ನಸೀಮ್ ಅವರು ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಪ್ರಕರಣ ಸಂಬಂಧ ಈ ವರೆಗೂ ಎನ್ಐಎ ಅಧಿಕಾರಿಗಳು ಒಟ್ಟು 8 ಪ್ರತ್ಯೇಕತಾವಾದಿ ನಾಯಕರನ್ನು ಬಂಧನಕ್ಕೊಳಪಡಿಸಿದೆ. ಶಬೀರ್ ಶಾ, ಗಿಲಾನಿ ಅಳಿಯ ಅಲ್ತಾಫ್ ಅಹ್ಮದ್ ಶಾ ಸೇರಿದಂತೆ ಹಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.