ದೇಶ

ಶಾಲೆಗಳಲ್ಲಿ ಯೋಗ ಕಡ್ಡಾಯ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Sumana Upadhyaya
ನವದೆಹಲಿ: ಒಂದರಿಂದ ಎಂಟನೇ ತರಗತಿಯವರೆಗೆ ಮಕ್ಕಳಿಗೆ ಶಾಲೆಗಳಲ್ಲಿ ಯೋಗಭ್ಯಾಸವನ್ನು ಕಡ್ಡಾಯಗೊಳಿಸಬೇಕೆಂದು ಮತ್ತು ರಾಷ್ಟ್ರೀಯ ಯೋಗ ನೀತಿಯನ್ನು ರಚಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ತಳ್ಳಿ ಹಾಕಿದೆ.
ನ್ಯಾಯಮೂರ್ತಿ ಎಂ.ಬಿ.ಲೋಕೂರ್ ಅವರನ್ನೊಳಗೊಂಡ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಇಂತಹ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಹೇಳಿದೆ.
ಶಾಲೆಗಳಲ್ಲಿ ಏನು ಕಲಿಸಬೇಕು ಎಂದು ಹೇಳಲು ನಾವು ಯಾರೂ ಅಲ್ಲ. ಇದು ನಮಗೆ ಸಂಬಂಧಪಟ್ಟ ವಿಷಯವಲ್ಲ. ನಾವು ಹೇಗೆ ಆದೇಶ ನೀಡಲು ಸಾಧ್ಯ ಎಂದು ನ್ಯಾಯಪೀಠ ಕೇಳಿದೆ.
 ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಬೇಕೆಂದು ಕೋರಿ ಅಶ್ವಿನಿ ಕುಮಾರ್ ಉಪಾಧ್ಯಾಯ, ವಕೀಲರೊಬ್ಬರು, ದೆಹಲಿ ಬಿಜೆಪಿ ವಕ್ತಾರ ಮತ್ತು ಜೆ.ಸಿ.ಸೇತ್ ಎಂಬುವವರು ಅರ್ಜಿ ಸಲ್ಲಿಸಿದ್ದರು.ಶಾಲೆಗಳಲ್ಲಿ ಏನು ಹೇಳಿಕೊಡಬೇಕೆಂಬುದು ಮೂಲಭೂತ ಹಕ್ಕು ಅಲ್ಲ ಎಂದು ನ್ಯಾಯಪೀಠ ಉಲ್ಲೇಖಿಸಿದೆ.
ಅಶ್ವಿನಿ ಕುಮಾರ್ ತಮ್ಮ ಅರ್ಜಿಯಲ್ಲಿ, ಜೀವನದ ಹಕ್ಕು, ಶಿಕ್ಷಣ ಮತ್ತು ಸಮಾನತೆಯ ಹಕ್ಕಿನಡಿಯಲ್ಲಿ ಒಂದರಿಂದ 8ನೇ ತರಗತಿವರೆಗೆ ಮಕ್ಕಳಿಗೆ ಯೋಗ ಮತ್ತು ಆರೋಗ್ಯ ಶಿಕ್ಷಣದ ಗುಣಮಟ್ಟದ ಪಠ್ಯಪುಸ್ತಕವನ್ನು ಒದಗಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ, ಎನ್ ಸಿಇಆರ್ ಟಿ, ಎನ್ ಸಿಟಿಇ ಮತ್ತು ಸಿಬಿಎಸ್ಇಗಳಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದರು.
ಈ  ಅರ್ಜಿಯನ್ನು ಪ್ರಾತಿನಿಧ್ಯವಾಗಿ ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಳೆದ ವರ್ಷ ನವೆಂಬರ್ 29ರಂದು ಸೂಚಿಸಿತ್ತು.
SCROLL FOR NEXT