ಡಿಜಿಪಿ ತಜೇಂದರ್ ಸಿಂಗ್ ಲುಥ್ರಾ
ಚಂಡೀಗಢ: ಐಎಎಸ್ ಅಧಿಕಾರಿಯೊಬ್ಬರ ಪುತ್ರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಅವರ ಪುತ್ರ ವಿಕಾಸ್ ಬರಾಲಾ ವೈದ್ಯಕೀಯ ಪರೀಕ್ಷೆಗಾಗಿ ರಕ್ತ ಹಾಗೂ ಮೂತ್ರದ ಮಾದರಿ ನೀಡಲು ನಿರಾಕರಿಸುತ್ತಿದ್ದಾರೆಂದು ಡಿಜಿಪಿ ತಜೇಂದರ್ ಸಿಂಗ್ ಲುಥ್ರಾ ಅವರು ಬುಧವಾರ ಹೇಳಿದ್ದಾರೆ.
ಚಂಡೀಗಢ ಯುವತಿ ಕಿರುಕುಳ ಪ್ರಕರಣ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಜಿಪಿ ತಜೇಂದರ್ ಸಿಂಗ್ ಅವರು, ಪ್ರಕರಣ ಸಂಬಂಧ ಕರ್ತವ್ಯ ನಿರತ ವೈದ್ಯರು ರಕ್ತ ಹಾಗೂ ಮೂತ್ರದ ಮಾದರಿ ನೀಡುವಂತೆ ಆರೋಪಿಗಳ ಬಳಿ ಕೇಳಿದ್ದಾರೆ. ಆದರೆ, ಆರೋಪಿಗಳು ಕಾನೂನು ವಿದ್ಯಾರ್ಥಿಗಳಾಗಿರುವುದಿಂದ ಕಾನೂನಿನ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರಿಂದಾಗಿ ರಕ್ತ ಹಾಗೂ ಮೂತ್ರ ಮಾದರಿ ನೀಡಲು ನಿರಾಕರಿಸುತ್ತಿದ್ದಾರೆಂದು ಹೇಳಿದ್ದಾರೆ.
ಈ ರೀತಿ ತನಿಖೆಗೆ ಸಹಕಾರ ನೀಡದಿದ್ದರೂ ಆರೋಪಿಗಳನ್ನು ಬಂಧನಕ್ಕೊಳಪಡಿಸಬಹುದಾಗಿದೆ. ತನಿಖೆ ಬಹಳ ಸಮಯ ತೆಗೆದುಕೊಳ್ಳುವುದಿಲ್ಲ. ಸತ್ಯವನ್ನು ಬಯಲಿಗೆಳೆಯಲಾಗುತ್ತದೆ. ಈಗಾಗಲೇ ನಾವು 6 ವಿವಿಧ ಪ್ರದೇಶಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡಿದ್ದೇವೆ. ದೃಶ್ಯಾವಳಿಗಳಲ್ಲಿ ಆರೋಪಿಗಳು ಯುವತಿಯನ್ನು ಹಿಂಬಾಲಿಸಿರುವುದು ಸ್ಪಷ್ಟವಾಗಿದೆ. ಪ್ರಕರಣ ಸಂಬಂಧ ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳು ದೊರಕಿವೆ. ಮತ್ತಷ್ಟು ಸಾಕ್ಷ್ಯಾಧಾರಗಳು ದೊರಕಿದರೆ ಉತ್ತಮವಾಗುತ್ತದೆ ಎಂದು ತಿಳಿಸಿದ್ದಾರೆ.
ತನಿಖೆ ಈಗಾಗಲೇ ಗಂಭೀರ ಮಟ್ಟಕ್ಕೆ ತಲುಪಿದ್ದು, ಹೀಗಾಗಿಯೇ ಆರೋಪಿಗಳಾದ ವಿಕಾಸ್ ಬರಾಲಾ ಹಾಗೂ ಆಶಿಷ್ ಕುಮಾರ್ ಇಬ್ಬರಿಗೂ ಸಮನ್ಸ್ ಜಾರಿ ಮಾಡಲಾಗಿದೆ. ಆರೋಪಿಗಳು ಠಾಣೆಗೆ ಬಂದ ಬಳಿಕ ವಿಚಾರಣೆಗೊಳಪಡಿಸಲಾಗುತ್ತದೆ ಎಂದಿದ್ದಾರೆ.
ಚಂಡೀಗಢದ ಹೆದ್ದಾರಿಯಲ್ಲಿ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಾಲಾ ಪುತ್ರ ವಿಕಾಸ್ ಬರಾಲಾ, ವರ್ಣಿಕಾ ಕುಂಡು ಎಂಬ ಯುವತಿಯ ಕಾರನ್ನು ಹಿಂಬಾಲಿಸಿದ್ದಲ್ಲದೇ, ಆಕೆಯನ್ನು ಅಪಹರಿಸಲು ಯತ್ನ ನಡೆಸಿದ್ದ. ಈ ಘಟನೆ ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದು, ಪ್ರತಿಭಟನೆಗಳು ವ್ಯಕ್ತವಾದ ಬಳಿಕ ಪೊಲೀಸರು ವಿಕಾಸ್ ಅವರನ್ನು ಬಂಧನಕ್ಕೊಳಪಡಿಸಿದ್ದರು. ನಂತರ ಬಿಡುಗಡೆ ಮಾಡಿದ್ದರು.