ಇಂದೋರ್: ಸಾವಿಗೆ ಪ್ರಚೋದನೆ ನೀಡುವ ಆಪಾಯಕಾರಿ ಮೊಬೈಲ್ ಗೇಮ್ ಆಗಿರುವ ಬ್ಲೂ ವೇಲ್ ಚಾಲೆಂಜ್ ಸ್ವೀಕರಿಸಿ ಇತ್ತೀಚೆಗಷ್ಟೇ ಮುಂಬೈನಲ್ಲಿ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಅಂಥಹದ್ದೇ ಯತ್ನಕ್ಕೆ ಮುಂದಾಗಿದ್ದ ಬಾಲಕನೊಬ್ಬನನ್ನು ಇಂದೋರ್ ನಲ್ಲಿ ರಕ್ಷಣೆ ಮಾಡಲಾಗಿದೆ.
ದೇಶದಲ್ಲಿ ಬ್ಲೂವೇಲ್ ಮೊಬೈಲ್ ಗೇಮ್ ಗೆ ನಿಷೇಧ ಹೇರಬೇಕೆಂದು ಭಾರೀ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಮತ್ತೊಬ್ಬ ಬಾಲಕ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದ್ದು ದೇಶದಾದ್ಯಂತ ಪೋಷಕರು ಬೆಚ್ಚಿ ಬೀಳುವಂತೆ ಮಾಡಿದೆ.
ಬ್ಲೂವೇಲ್ ಚಾಲೆಂಚ್ ನ 50ನೇ ಹಂತ ತಲುಪಿದ್ದ ಮಧ್ಯಪ್ರದೇಶದ ಇಂದೋರ್ ನ 13 ವರ್ಷದ ಬಾಲಕನೊಬ್ಬ ಗುರುವಾರ ಶಾಲೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಗುರುವಾರ ಮಧ್ಯಾಹ್ನ ಚಮಲೀದೇವಿ ಪಬ್ಲಿಕ್ ಸ್ಕೂಲ್ ನ ಶಾಲೆಯ 3ನೇ ಮಹಡಿಯಿಂದ ಕೆಳಗೆ ಹಾರಿ ಬಾಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ, ಸಹಪಾಠಿಗಳು, ಶಿಕ್ಷಕರು ಸ್ಥಳಕ್ಕೆ ಧಾವಿಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ, ಬಾಲಕ ಕಳೆದ ಕೆಲ ದಿನಗಳಿಂದ ತಂದೆಯ ಮೊಬೈಲ್ ನಲ್ಲಿ ಬ್ಲೂವೇಲ್ ಗೇಮ್ ಆಡುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಇದರ ಅಂತಿಮ ಹಂತವಾಗಿ ಗುರುವಾರ ಆತನಿಗೆ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಅದಕ್ಕೆ ಬಾಲಕ ಯತ್ನಿಸುತ್ತಿರವಾಗಲೇ, ಸಹಪಾಠಿಗಳ ಸಮಯ ಪ್ರಜ್ಞೆಯಿಂದಾಗಿ ಬದುಕುಳಿದಿದ್ದಾನೆ.
ಬ್ಲೂ ವೇಲ್ ಒಂದು ಆನ್ ಲೈನ್ ಗೇಮ್ ಆಗಿದ್ದು, ಇದರಲ್ಲಿ ಸವಾಲು ಸ್ವೀಕರಿಸಿದವರಿಗೆ ದಿನಕ್ಕೊಂದು ಟಾಸ್ಕ್ ನೀಡಲಾಗುತ್ತದೆ. ಸವಾಲು ಸ್ವೀಕರಿಸುವಾಗ ಕಡೆಯಲ್ಲಿ ನೀವು ಸಾಯಬೇಕಾಗುತ್ತದೆ ಎಂದು ಸೂಚಿಸಲಾಗುತ್ತದೆ. ಮಾನಸಿಕವಾಗಿ ದುರ್ಬಲ ಮಕ್ಕಳನ್ನೇ ಗೇಮ್ ನತ್ತ ಸೆಳೆಯಲಾಗುತ್ತದೆ. ಒಂದು ವೇಳೆ, ಮಕ್ಕಳು ಮಧ್ಯದಲ್ಲಿ ಹಿಂದೆ ಸರಿಯಲು ಯತ್ನಿಸಿದರೆ, ನಿಮ್ಮ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ನಮ್ಮವರು ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಹೆದರಿಸಲಾಗುತ್ತದೆ.
ಇದನ್ನು ಒಪ್ಪಿದವರಿಗೆ ದಿನಕ್ಕೊಂದರಂತೆ 50 ದಿನ ಹೊಸ ಟಾಸ್ಕ್ ನೀಡಲಾಗುತ್ತದೆ. ರಾತ್ರಿ ಏಳುವುದು, ಭಯಾನಕ ಚಿತ್ರ ನೋಡುವುದು, ನರ ಕತ್ತರಿಸಿಕೊಳ್ಳುವುದು ಹೀಗೆ ನಾನು ಕಠಿಣ ಟಾಸ್ಕ್ ಗಳು ಇರುತ್ತದೆ. 50ನೇ ದಿನ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ. ಈ ಭಯಾನಕ ಗೇಮ್ ನಿಂದಾಗಿ ಯುರೋಪ್ ಮತ್ತು ರಷ್ಯಾದಾದ್ಯಂತ ಈ ವರೆಗೂ ಸುಮಾರು 150 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಇದೇ ಗೇಮ್ ಭಾರತೀಯರನ್ನೂ ಭೀತಿಗೊಳಗಾಗುವಂತೆ ಮಾಡುತ್ತಿದೆ.