ತಿರುವನಂತಪುರಂ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಂಗಳವಾರ ಕೇರಳದ ಪಲಕ್ಕಾಡ್ ನಲ್ಲಿ ಜಿಲ್ಲಾಡಳಿತದ ಆದೇಶವನ್ನು ದಿಕ್ಕರಿಸಿ ಸರ್ಕಾರಿ ಅನುದಾನಿತ ಶಾಲೆಯೊಂದರಲ್ಲಿ ಧ್ವಜಾರೋಹಣ ನೆರವೇರಿಸಿದ್ದು, ಶಾಲೆಯ ವಿರುದ್ಧ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
70ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಕರ್ನಾಕ್ಕಿಯಮ್ಮನ್ ಶಾಲೆಯಲ್ಲಿ ರಾಷ್ಟ್ರಧ್ವಜ ಹಾರಿಸಲು ಮೋಹನ್ ಭಾಗವತ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಇದಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಸರ್ಕಾರಿ ಅನುದಾನಿತ ಶಾಲೆಯಲ್ಲಿ ಮಿಸ್ಟರ್ ಭಾಗವತ್ ಯಾವುದೇ ಕಾರಣಕ್ಕೂ ಧ್ವಜಾರೋಹಣ ನೆರವೇರಿಸಬಾರದು ಎಂದು ಪಾಲಕ್ಕಾಡ್ ಜಿಲ್ಲಾಧಿಕಾರಿ ಮೇರಿ ಕುಟ್ಟಿ ಅವರು ಶಾಲೆಗೆ ಲಿಖಿತ ಆದೇಶ ನೀಡಿದ್ದರು. ಶಾಲೆಯಲ್ಲಿ ಅಧಿಕಾರಿ ವರ್ಗದವರು ಅಥವಾ ಶಾಸಕರಂತಹ ಜನಪ್ರತಿನಿಧಿಗಳು ಮಾತ್ರ ಧ್ವಜಾರೋಹಣ ನೆರವೇರಿಸಬೇಕೆಂದು ಡಿಸಿ ಆದೇಶದಲ್ಲಿ ತಿಳಿಸಿದ್ದರು ಎಂದು ವರದಿ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ, ಜಿಲ್ಲಾಧಿಕಾರಿಯವರ ಆದೇಶ ಉಲ್ಲಂಘಿಸಲಾಗಿಲ್ಲ. ಆಡಳಿತ ಮಂಡಳಿ ಅಧಿಕಾರಿಗಳ ಮತ್ತು ಮುಖ್ಯೋಪಾಧ್ಯಾಯರ ಹಾಜರಿಯಲ್ಲಿ ಪ್ರಮುಖ ವ್ಯಕ್ತಿಯೊಬ್ಬರು ಧ್ವಜಾರೋಹಣ ನೆರವೇರಿಸಬೇಕು ಎಂಬುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು ಎಂದು ಸ್ಪಷ್ಟಪಡಿಸಿದೆ.
ಇನ್ನು ಭಾಗವತ್ ಧ್ವಜಾರೋಹಣ ವಿವಾದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಾಗೂ ಆರ್ ಎಸ್ಎಸ್, ರಾಷ್ಟ್ರಧ್ವಜವನ್ನು ಹಾರಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದಿದೆ.