ನವದೆಹಲಿ: ಭಾರತೀಯ ಸೇನೆಯ ಮೂರೂ ಪಡೆಗಳ ಸೇವಾನಿರತ ಸಿಬ್ಬಂದಿಗೆ ಮೊದಲು ವಿಮಾನವೇರಲು ಇನ್ನು ಮುಂದೆ ಏರ್ ಇಂಡಿಯಾ ವಿಮಾನ ಅನುಮತಿ ನೀಡುತ್ತದೆ.
ಭಾರತದ 71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಿನ್ನೆ ಮೊದಲ ಬಾರಿಗೆ ಈ ಉಪಕ್ರಮವನ್ನು ಆರಂಭಿಸಿದೆ. ಭಾರತೀಯ ಸೇನೆಯ ವಾಯುಪಡೆ, ಭೂ ಸೇನೆ ಮತ್ತು ನೌಕಾಪಡೆಯ ಹಿಂದಿನ, ಇಂದಿನ ಮತ್ತು ಭವಿಷ್ಯದ ಸೈನಿಕರಿಗೆ ಗೌರವ ನೀಡುವ ಸಲುವಾಗಿ ಈ ಕ್ರಮವನ್ನು ಅಳವಡಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಏರ್ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅಶ್ವನಿ ಲೊಹನಿ, ಬ್ಯುಸ್ ನೆಸ್ ಕ್ಲಾಸ್ ವರ್ಗದ ಪ್ರಯಾಣಿಕರಿಗಿಂತ ಮೊದಲೇ ಸೇನಾ ಸಿಬ್ಬಂದಿಗೆ ವಿಮಾನವೇರಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ದೇಶೀಯ ವಿಮಾನ ಪ್ರಯಾಣದಲ್ಲಿ ಸೇವಾ ನಿರತ ಸೇನಾ ಸಿಬ್ಬಂದಿಗೆ ಪ್ರಯಾಣ ದರದಲ್ಲಿ ಏರ್ ಇಂಡಿಯಾ ವಿಮಾನ ರಿಯಾಯಿತಿ ಕಲ್ಪಿಸಲಿದೆ.