ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಆದೇಶಿಸಿದ್ದಾರೆ.
ಎಐಎಡಿಎಂಕೆಯ ಎರಡು ಬಣಗಳ ವಿಲೀನಕ್ಕೆ ಪನ್ನೀರ್ ಸೆಲ್ವಂ ಮುಂದಿಟ್ಟಿದ್ದ ಬೇಡಿಕೆಗಳ ಪೈಕಿ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಹಾಗೂ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವನ್ನಾಗಿಸಬೇಕೆಂಬುದು ಪ್ರಮುಖ ಬೇಡಿಕೆಯಾಗಿತ್ತು. ಈ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ ಜಯಲಲಿತಾ ಅವರ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಜಯಲಲಿತಾ ಅವರ ಸಾವಿನ ಬಗ್ಗೆ ಹಲವು ಅನುಮಾನಗಳಿರುವುದರಿಂದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ನ್ಯಾಯಾಂಗ ತನಿಖೆ ನಡೆಸಲಾಗುತ್ತದೆ ಎಂದು ತಮಿಳುನಾಡಿ ಸಿಎಂ ಪಳನಿ ಸ್ವಾಮಿ ಹೇಳಿದ್ದಾರೆ. ಇದೇ ವೇಳೆ ಜಯಲಲಿತಾ ಅವರಿದ್ದ ನಿವಾಸವನ್ನು ಸ್ಮಾರಕವನ್ನಾಗಿಸಿ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿರಿಸಲಾಗುವುದು ಎಂದು ಹೇಳಿದ್ದಾರೆ.