ದೇಶ

ಮಂಡಿ ಕೀಲು ಶಸ್ತ್ರಚಿಕಿತ್ಸೆ ಅಗ್ಗ: ಖಾಸಗಿ ಆಸ್ಪತ್ರೆಗಳ ಶಸ್ತ್ರ ಚಿಕಿತ್ಸೆ ವೆಚ್ಚಕ್ಕೆ ಸರ್ಕಾರದ ಕಡಿವಾಣ

Shilpa D
ನವದೆಹಲಿ:  ಮಂಡಿ ನೋವಿನಿಂದ ಬಳಲುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಲಾಗುವ ಕೃತಕ ಮಂಡಿ ಕೀಲು ಉಪಕರಣಗಳ ಬೆಲೆಯ ಗರಿಷ್ಠ ಮಿತಿಯನ್ನು ನಿಗದಿಗೊಳಿಸಿ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ ಬುಧವಾರ ಆದೇಶ ಹೊರಡಿಸಿದೆ. ಇದರಿಂದಾಗಿ ಮಂಡಿಕೀಲು ಶಸ್ತ್ರ ಚಿಕಿತ್ಸೆ ವೆಚ್ಚದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ.
ಮಾರುಕಟ್ಟೆಯಲ್ಲಿ ಕೃತಕ ಮಂಡಿಚಿಪ್ಪುಗಳ ಬೆಲೆ ಶೇ 60ಕ್ಕಿಂತಲೂ ಅಗ್ಗವಾಗಲಿದ್ದು, ಇನ್ನು ಮುಂದೆ ರು. 4,090 ರಿಂದ 62,770 ಬೆಲೆಗೆ ಉಪಕರಣ ದೊರೆಯಲಿವೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಭಾರತೀಯರಿಗೆ ಈ ಹೊಸ ಉಡುಗೊರೆ ನೀಡಿದ್ದಾರೆ.
ಇದಕ್ಕೂ ಮೊದಲು ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ, ಹೃದಯದಲ್ಲಿ ಅಳವಡಿಸುವ ಸ್ಟೆಂಟ್‌ಗಳ ಬೆಲೆಗಳ ಮೇಲೆ ಕೂಡ ಗರಿಷ್ಠ ಮಿತಿ ಹೇರಿತ್ತು. ಇದೀಗ ಸ್ಟೆಂಟ್‌ಗಳಷ್ಟೇ ದುಬಾರಿಯಾದ ಕೃತಕ ಮಂಡಿ ಕೀಲು ಉಪಕರಣಗಳ ಬೆಲೆಗಳ ಮೇಲೂ ನಿಯಂತ್ರಣ ಹೇರಿದೆ.
ಕ್ರೋಮಿಯಮ್ ಕೊಬಾಲ್ಟ್ ಇನ್ ಫ್ಲಾಂಟ್ ಎಂಬ ಉಪಕರಣವನ್ನು ಹೆಚ್ಚಾಗಿ ಮಂಡಿಕೀಲು ಶಸ್ತ್ರ ಚಿಕಿತ್ಸೆ ವೇಳೆ ಬಳಸಲಾಗುತ್ತದೆ. ಮೊದಲು 1.58 ಲಕ್ಷ ದಿಂದ 2.5 ಲಕ್ಷ ರು ವರೆಗೆ ಇದರ ಬೆಲೆ ಇರುತ್ತಿತ್ತು. ಆದರೆ ದರ ನಿಗದಿಯಾದ ಮೇಲೆ  ರು. 54,720ಗೆ ಸಿಗಲಿದೆ.
ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು ಇಂದಿನಿಂದಲೇ ಪರಿಷ್ಕೃತ ಬೆಲೆಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೇಳಿದ್ದಾರೆ. ದೇಶದಲ್ಲಿ ಪ್ರತಿವರ್ಷ 1.2 ಲಕ್ಷ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು ಇನ್ನು ಮುಂದೆ ಅಂದಾಜು ರು.1,500 ಕೋಟಿ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದರು.
ಹೆಚ್ಚು ಬಳಕೆಯಲ್ಲಿರುವ ಕೋಬಾಲ್ಟ್‌ ಕ್ರೋಮಿಯಂ, ಅತ್ಯಂತ ಉತ್ತಮ ಗುಣಮಟ್ಟದ ಟಿಟಾನಿಯಂ ಆಕ್ಸಿಡೈಸ್ಡ್‌, ಸುಲಭವಾಗಿ ಕಾಲನ್ನು ಮಡಚಲು ಅನುಕೂಲವಾಗುವ ಜಿಕ್ರೋನಿಯಂ ಲೋಹದ ಕೃತಕ ಮಂಡಿಚಿಪ್ಪುಗಳ ಬೆಲೆ ಶೇ 69ರಷ್ಟು ಅಗ್ಗವಾಗಲಿವೆ.  ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದರೆ ಅಂತಹ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. 
SCROLL FOR NEXT